ಕಾರವಾರ: ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಮಳೆಯಿಂದಾಗುವ ಅನಾಹುತಗಳ ಬಗ್ಗೆ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತು ಸ್ಪಂದಿಸುವ ಹಾಗೂ ಹಾನಿಗಳನ್ನು ತಡೆಗಟ್ಟುವ ಸಂಪೂರ್ಣ ಜವಾಬ್ದಾರಿ ವಿಪತ್ತು ನಿರ್ವಹಣಾ ಕೇಂದ್ರದ ಮೇಲಿದೆ. ಈ ಕೇಂದ್ರದಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿ ಅತ್ಯಂತ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಉತ್ತರ ಕನ್ನಡ ಜಿಲ್ಲೆಯಲ್ಲಿ 12 ತಾಲೂಕುಗಳಲ್ಲಿ ತುರ್ತು ವಿಪತ್ತು ನಿರ್ವಹಣಾ ಕೇಂದ್ರಗಳನ್ನು ತೆರೆಯಲಾಗಿದೆ. ಇವು 24*7 ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳು ಸಂಭವಿಸಿದಾಗ ತಕ್ಷಣವೇ ವಿಕೋಪ ಕೇಂದ್ರದ ಸಿಬ್ಬಂದಿ ಸಂಬಂಧಪಟ್ಟ ಇಲಾಖೆಗಳಿಗೆ ಈ ಮಾಹಿತಿ ಹಂಚಿಕೊಂಡು, ತುರ್ತಾಗಿ ಮಾಹಿತಿ ರವಾನೆ ಮಾಡಿ, ಎಲ್ಲ ಇಲಾಖೆಗಳೊಂದಿಗೆ ಪರಸ್ಪರ ಸಮನ್ವಯದಿಂದ ಇರಬೇಕು. ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ಕಚೇರಿಯ ವೈರ್‌ಲೆಸ್ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ ಕುಮಾರ ಕಂಟ್ರೋಲ್ ರೂಂನಲ್ಲಿ ಕಾರ್ಯ ನಿರ್ವಹಿಸುವ ಕುರಿತು ತರಬೇತಿ ನೀಡಿ, ಜಿಲ್ಲೆಯಲ್ಲಿ ಅನಾಹುತಗಳು ಸಂಭವಿಸಿದಾಗ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಲು ವಿಪತ್ತು ನಿರ್ವಹಣಾ ಕೇಂದ್ರ ಅತ್ಯಂತ ಅವಶ್ಯಕವಾಗಿದೆ. ಅನಾಹುತಗಳು ಸಂಭವಿಸಿದಾಗ ಅದರ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಬೇಕು ಎಂದರು.ಸಂಬಂಧಪಟ್ಟ ಇಲಾಖೆಗೆ ನಿಖರ ಮತ್ತು ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಎಲ್ಲ ಇಲಾಖೆಗಳ ಮತ್ತು ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು ಕಂಟ್ರೋಲ್ ರೂಂ ನಲ್ಲಿರಬೇಕು ಎಂದರು.
ವೈರ್ ಲೆಸ್, ವಾಕಿಟಾಕಿ ಬಳಕೆ ಸೇರಿದಂತೆ ವಿವಿಧ ಸಂಪರ್ಕ ಸಾಧನಗಳ ಬಳಕೆ ಬಗ್ಗೆ ತರಬೇತಿ ನೀಡಲಾಯಿತು.
ತರಬೇತಿಯಲ್ಲಿ ಪೊಲೀಸ್ ಅಧಿಕಾರಿ ರಮೇಶ್ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ವಿಪತ್ತು ನಿರ್ವಹಣಾ ಕೇಂದ್ರದ ಸಿಬ್ಬಂದಿ ಇದ್ದರು.