ಕನ್ನಡಪ್ರಭ ವಾರ್ತೆ ಮೈಸೂರು ಶಿಕ್ಷಣವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಶಿಕ್ಷಣ ಒಂದು ತಪಸ್ಸು ಇದ್ದ ಹಾಗೆ. ಕಠಿಣ ಪರಿಶ್ರಮದಿಂದ ಶಿಸ್ತು ಬದ್ದವಾಗಿ ವಿದ್ಯಾರ್ಜನೆ ಮಾಡಿದರೆ ಜೀವನದಲ್ಲಿ ಸಾಧನೆ ಮಾಡಿ ಗುರಿ ತಲುಪಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜ್ ಹೇಳಿದರು.ಬೋಗಾದಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದಲ್ಲಿ ಪ್ರೇರಣೆ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಸಹ ಸರ್ಕಾರಿ ಹಾಸ್ಟೆಲ್ ನಲ್ಲೇ ಓದಿದ್ದು, ಹಾಸ್ಟೆಲ್ ನ ಮಹತ್ವ ನೀವು ದೊಡ್ಡವರಾದ ಮೇಲೆ ನಿಮಗೆ ಗೊತ್ತಾಗುತ್ತದೆ. ಸರ್ಕಾರ ನಿಮಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಅದರ ಸದುಪಯೋಗವನ್ನು ಉಪಯೋಗಿಸಿಕೊಂಡು ಗುರಿಸಾಧಿಸಬೇಕು. ಇಲ್ಲದಿದ್ದರೆ ನಿಮಗೆ ಪಾಪಪ್ರಜ್ಞೆ ಕಾಡುತ್ತದೆ. ನಿಮಗಿಂತ ಕಷ್ಟ ಪಡುವವರು ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಆದರೆ ಹಾಸ್ಟೆಲ್ ನಲ್ಲಿ ಅದು ಸರಿ ಇಲ್ಲ, ಇದು ಸರಿಯಿಲ್ಲ ಅನ್ನುವುದಲ್ಲ ಮೊದಲು ನಾವು ಸರಿ ಇದ್ದೀವಾ ಎಂದು ತಿಳಿದುಕೊಳ್ಳಬೇಕು ಹಾಸ್ಟೆಲ್ ನಲ್ಲಿ ಸಮಸ್ಯೆ ಇದ್ದರೆ ಸರಿಪಡಿಸಬಹುದು, ಆದರೆ ನಿಮ್ಮ ಮನಸ್ಸಿನ ಸಮಸ್ಯೆಯನ್ನು ನೀವೇ ಸರಿಪಡಿಸಿಕೊಳ್ಳಬೇಕು. ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು ಬೇರೆಯವರಿಗೆ ಒಳ್ಳೆಯದನ್ನೇ ಬಯಸಬೇಕು. ದೇಹವನ್ನು ಶುದ್ಧವಾಗಿಟ್ಟು ಕೊಳ್ಳಬೇಕು. ನಿಮ್ಮ ಚಿಂತೆಗಳು ಸಕಾರಾತ್ಮಕವಾಗಿರಬೇಕು. ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿರಬೇಕು. ಒಳ್ಳೆಯ ಸ್ನೇಹಿತರನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ನಿಮ್ಮನ್ನು ಯಾರು ಉದ್ದಾರ ಮಾಡಲ್ಲ ನಿಮ್ಮ ಬಾಳಿಗೆ ನೀವೇ ಶಿಲ್ಪಿಗಳಾಗಬೇಕು ಎಂದರು.5 ವರ್ಷ ಕಷ್ಟಪಟ್ಟರೆ 50 ವರ್ಷ ಚೆನ್ನಾಗಿರಬಹುದು ಮೋಜು ಮಸ್ತಿ ಶೋಕಿಗಳಿಗೆ ಕಡಿವಾಣ ಹಾಕಿ, ನಿಮ್ಮ ತಂದೆ ತಾಯಿಯ ಕಷ್ಟಗಳನ್ನು ನೆನಪಿಸಿಕೊಂಡು ಮುಂದೆ ಏನಾಗಬೇಕು ಎನ್ನುವುದನ್ನು ಚಿಂತನೆ ಮಾಡಿರಿ ಅಂಬೇಡ್ಕರ್ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಳ್ಳಿರಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿಕೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಸಾಧನೆ ಮಾಡಿ ದೇಶದ ಉತ್ತಮ ಪ್ರಜೆಗಳಾಗಿ ಎಂದರು.ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ನಿಲಯಪಾಲಕರಾದ ಚಿಕ್ಕೀರಯ್ಯ, ಶಿವಮಲ್ಲಯ್ಯ, ನಂಜಯ್ಯ, ರಾಜೇಶ್ ಇದ್ದರು.