ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾನೂನು ಸೇವಾ ಪ್ರಾಧಿಕಾರದಿಂದ ಜನಸಾಮಾನ್ಯರಿಗೆ ನ್ಯಾಯ, ಕಾನೂನು ಹಕ್ಕುಗಳು ಮತ್ತು ಸರ್ಕಾರದ ಜನಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ, ಅರ್ಹರಿಗೆ ತಲುಪುವಂತೆ ಮಾಡಲು ಗ್ರಾಮಮಟ್ಟದಿಂದ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾನೂನು ಜಾಗೃತಿಗಾಗಿ ಜಿಲ್ಲೆಯಲ್ಲಿ ಸೆ.26ರಂದು ಏಕಕಾಲದಲ್ಲಿ 850ಕ್ಕೂ ಅಧಿಕ ಕಾನೂನು ಸಲಹಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರಣ್ಣವರ ಹೇಳಿದರು.ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಅವರು ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 26ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸಲಹಾ ಕೇಂದ್ರಗಳ ಉದ್ಘಾಟನೆ ನಡೆಯಲಿದೆ.
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ರವಿ ವಿ. ಹೊಸಮನಿ ಕೇಂದ್ರಗಳ ಉದ್ಘಾಟಿಸುವರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶರಾದ ಡಿ.ಕೆ.ವೇಲಾ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಟಿ.ಆರ್. ಗುರುಬಸವರಾಜ್ ಉಪಸ್ಥಿತರಿರುವರು ಎಂದರು.ಕಾನೂನು ಸಲಹಾ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳು, ಜನಸಾಮಾನ್ಯರು, ಅಂಗವಿಕಲರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರಿಗೂ ಕಾನೂನು ಅರಿವು ಮೂಡಿಸಿ, ತಮ್ಮ ಹಕ್ಕುಗಳನ್ನು ಪಡೆಯುವಂತಾಗಲು ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಶಾಲಾ ಹಂತದಲ್ಲಿ ಈಗಾಗಲೇ ಸಮಿತಿ ರಚಿಸಲಾಗಿದೆ. ಇಲ್ಲಿನ ಕೇಂದ್ರಗಳಿಗೆ ವಾರಕ್ಕೆ ಒಂದು ದಿನ ವಕೀಲರು ಆಗಮಿಸಿ, ಕಾನೂನುಗಳ ಜಾಗೃತಿ ಮೂಡಿಸಿ, ನೆರವು ಅಗತ್ಯವಿರುವವರಿಗೆ ಕಾನೂನು ಸೇವಾ ಪ್ರಾಧಿಕಾರ ನೆರವಾಗಲಿದೆ. ಯಾವುದೇ ಸರ್ಕಾರದ ಯೋಜನೆಗಳ ಬಗ್ಗೆಯೂ ದೂರುಗಳಿದ್ದಲ್ಲಿ ಇಲ್ಲಿ ನೀಡಬಹುದು ಎಂದರು.
ಕಾನೂನು ಸಲಹೆಗೆ 15100 ಟೋಲ್ ಫ್ರೀ:ಎಲ್ಲ ಜನರಿಗೆ ಕಾನೂನು ನೆರವು ಉದ್ದೇಶದಿಂದ ಜನರಿಗೆ ಬೇಕಾದಾಗ ತಕ್ಷಣ ಸ್ಪಂದನೆ ಮಾಡಲು 15100 ಸಂಖ್ಯೆಯ ಟೋಲ್ ಫ್ರೀ ಸಂಖ್ಯೆ ಸ್ಥಾಪಿಸಲಾಗಿದೆ. ಈ ಸಂಖ್ಯೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕರೆ ಮಾಡಿ ದೂರು, ಮಾಹಿತಿ ಪಡೆಯಬಹುದು. ಇಲ್ಲಿ ನುರಿತ ವಕೀಲರು ಸ್ಪಂದನೆ ಮಾಡುವರು. ಈ ಅವಧಿ ನಂತರವೂ ಕರೆ ಮಾಡಿದಲ್ಲಿ ಅದರ ದಾಖಲೆ ಲಭ್ಯವಾಗಲಿದೆ. ಕಾನೂನು ನೆರವು ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಈಗಾಗಲೇ ಕಾನೂನು ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ತಾಲೂಕುಗಳಲ್ಲಿ ಪ್ಯಾನಲ್ ಅಡ್ವೊಕೇಟ್‌ಗಳನ್ನು ಸಹ ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಕೋರ್ಟ್‌ಗಳಲ್ಲಿ ವಾದ ಮಾಡಲು ಸಹ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರ ಸೇವೆ ಉಚಿತವಾಗಿ ಪಡೆಯಲು ಅವಕಾಶ ಇದೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರಿಗೆ ಸಂಪೂರ್ಣ ಉಚಿತವಿದೆ. ಸಾಮಾನ್ಯರಾಗಿದ್ದಲ್ಲಿ ₹3 ಲಕ್ಷ ಆದಾಯ ಮಿತಿಯಲ್ಲಿದ್ದರೆ ಪ್ರಾಧಿಕಾರದಿಂದಲೇ ವಕೀಲರ ನೇಮಕ ಮಾಡಲಾಗುತ್ತದೆ.
-ಮಹಾವೀರ ಮ.ಕರೆಣ್ಣವರ್, ನ್ಯಾಯಾಧೀಶ