ಕಾರವಾರ: ಶಿರಸಿಯಲ್ಲಿ ಹೆಚ್ಚುವರಿ ಸಖೀ ಕೇಂದ್ರ ತೆರೆಯುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.
ಕಾರವಾರದಲ್ಲಿರುವ ಸಖಿ ಕೇಂದ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಕಾರವಾರ ಕೇಂದ್ರವು ಇತರೆ ತಾಲೂಕುಗಳಿಂದ ದೂರ ಇರುವ ಕಾರಣ ನೊಂದ ಮಹಿಳೆಯರಿಗೆ ತಕ್ಷಣದಲ್ಲಿ ಸೂಕ್ತ ನೆರವು ನೀಡುವ ಉದ್ದೇಶವಿದೆ ಎಂದರು.
ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿಯನ್ವಯ ಭೌಗೋಳಿಕ ವಿಸ್ತಾರ ಹೊಂದಿರುವ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುವ ಜಿಲ್ಲೆಗಳಲ್ಲಿ ಹೆಚ್ಚುವರಿ ಸಖೀ ಒನ್ ಸ್ಟಾಪ್ ಸೆಂಟರ್ ತೆರೆಯಲು ಅವಕಾಶವಿದ್ದು, ಜಿಲ್ಲೆಯು ಭೌಗೋಳಿಕವಾಗಿ ವಿಸ್ತೀರ್ಣವಾಗಿರುವುದರಿಂದ ಶಿರಸಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಹೆಚ್ಚುವರಿ ಸಖೀ ಕೇಂದ್ರ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.ಪೊಲೀಸ್ ಇಲಾಖೆಯ ಮಾಹಿತಿಯಂತೆ ಜೋಯಿಡಾ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲೂಕುಗಳ ಪೊಲೀಸ್ ಠಾಣೆಗಳಲ್ಲಿ 2022 ರಲ್ಲಿ 240, 2023ರಲ್ಲಿ 305, 2024ರಲ್ಲಿ 297 ಸಂಖ್ಯೆಯ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದರು.
ಶಿರಸಿಯಲ್ಲಿನ ಸಖಿ ಸದನ ಕೇಂದ್ರದಲ್ಲಿನ ಮಹಿಳೆಯರಿಗೆ ಆರೋಗ್ಯ ಇಲಾಖೆಯ ಮೂಲಕ ಮನಃಶಾಸ್ತ್ರಜ್ಞರಿಂದ ಕೌನ್ಸಲಿಂಗ್ ಆಯೋಜಿಸುವುದರ ಜೊತೆಗೆ ವಕೀಲರಿಂದ ಕಾನೂನು ನೆರವು ಒದಗಿಸಿ , ಜಿಲ್ಲೆಯಲ್ಲಿನ ಸಖಿ ಮತ್ತು ಸ್ವೀಕಾರ ಕೇಂದ್ರಗಳಲ್ಲಿ ಮಹಿಳೆಯರಿಗೆ ನೆರವಾಗುವ ಮಾಹಿತಿ ಒಳಗೊಂಡ ಪುಸ್ತಕಗಳ ಸಂಗ್ರಹಾಲಯ ವ್ಯವಸ್ಥೆ ಮಾಡಿ ಎಂದರು.
ಜಿಪಂ ಸಿಇಒ ದಿಲೀಷ್ ಶಶಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಝುಪಿಶಾನ್ ಹಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮತ್ತಿತರರು ಇದ್ದರು.