ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಕೀರ್ಣಕ್ಕೆ ಪದೇಪದೇ ಬಾಂಬ್ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಯಾವುದೇ ಅನಾಪೇಕ್ಷಿತ ಘಟನೆಗಳಿಗೆ ಆಸ್ಪದ ಇಲ್ಲದಂತೆ ನ್ಯಾಯಾಲಯದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ ಮತ್ತು ಪ್ರತಿ ನಿತ್ಯ ನ್ಯಾಯಾಲಯ ಸಂಕೀರ್ಣದೊಳಗೆ ಸಂಪೂರ್ಣ ಕಟ್ಟುನಿಟ್ಟಿನ ತಪಾಸಣೆ - ಪರಿಶೀಲನೆ ನಡೆಸುತ್ತಿದೆ.
ಉಡುಪಿ: ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಂಕೀರ್ಣಕ್ಕೆ ಪದೇಪದೇ ಬಾಂಬ್ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಯಾವುದೇ ಅನಾಪೇಕ್ಷಿತ ಘಟನೆಗಳಿಗೆ ಆಸ್ಪದ ಇಲ್ಲದಂತೆ ನ್ಯಾಯಾಲಯದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ ಮತ್ತು ಪ್ರತಿ ನಿತ್ಯ ನ್ಯಾಯಾಲಯ ಸಂಕೀರ್ಣದೊಳಗೆ ಸಂಪೂರ್ಣ ಕಟ್ಟುನಿಟ್ಟಿನ ತಪಾಸಣೆ - ಪರಿಶೀಲನೆ ನಡೆಸುತ್ತಿದೆ.
ಕಳೆದ ವಾರ 3 ಬಾರಿ ಇ-ಮೇಲ್ ಮೂಲಕ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಒಡ್ಡಲಾಗಿತ್ತು. ಈ ಬಗ್ಗೆ ಪೊಲೀಸರು ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳ ಮೂಲಕ ನ್ಯಾಯಾಲಯವನ್ನು ಜಾಲಾಡಲಾಗಿತ್ತು, ಆದರೆ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿರಲಿಲ್ಲ ಮತ್ತು ಈ ಬೆದರಿಕೆಗಳನ್ನು ಹುಸಿ ಕರೆಗಳಾಗಿರುವುದು ಸಾಬೀತಾಗಿತ್ತು.ಈ ಹುಸಿ ಕರೆಗಳಿಂದ ನ್ಯಾಯಾಲಯಕ್ಕೆ ಬರುವ ಜನರ, ಅಲ್ಲಿರುವ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಹಾಗೂ ಸಿಬ್ಬಂದಿಗಳಲ್ಲಿ ಆತಂಕ ಉಂಟಾಗಿತ್ತು ಮತ್ತು ನ್ಯಾಯಾಲಯದ ಕಲಾಪಗಳಿಗೆ ಅಡ್ಡಿಯಾಗಿತ್ತು.ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಸುರಕ್ಷತೆಯ ಭರವಸೆ ಮೂಡಿಸುವುದಕ್ಕೆ, ನ್ಯಾಯಾಲಯದ ಕಲಾಪಗಳು ಯಾವುದೇ ಅಡಚಣೆಯಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪ್ರತಿದಿನ ಬೆಳಗ್ಗೆ ನ್ಯಾಯಾಲಯ ಆರಂಭವಾಗುವ ಮುನ್ನ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಪೊಲೀಸರು ನ್ಯಾಯಾಲಯ ಸಂಕೀರ್ಣ, ನ್ಯಾಯಾಂಗ ಸಭಾಂಗಣಗಳು, ವಾಹನ ನಿಲುಗಡೆ ಪ್ರದೇಶ ಮತ್ತು ಸುತ್ತಲಿನ ಆವರಣವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ತಪಾಸಣೆ ಪೂರ್ಣಗೊಂಡ ಬಳಿಕವೇ ನ್ಯಾಯಾಲಯದ ದೈನಂದಿನ ಕಲಾಪಗಳಿಗೆ ಅವಕಾಶ ನೀಡಲಾಗುತ್ತಿದೆ.ಅಲ್ಲದೇ ಉಡುಪಿ ವಕೀಲರ ಸಂಘದ ಮನವಿಯ ಮೇರೆಗೆ ನ್ಯಾಯಾಲಯದ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗಿದೆ. ಅಪರಿಚಿತ ವ್ಯಕ್ತಿಗಳ ಅನಗತ್ಯ ಪ್ರವೇಶವನ್ನು ನಿಯಂತ್ರಿಸುವ ಉದ್ದೇಶದಿಂದ ನ್ಯಾಯಾಲಯದ ಕೆಲವು ಪ್ರವೇಶ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ನಿಗದಿತ ದ್ವಾರಗಳ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಅಗತ್ಯವಿದ್ದಲ್ಲಿ ಗುರುತಿನ ಚೀಟಿ ಪರಿಶೀಲನೆ ಹಾಗೂ ಬ್ಯಾಗ್ ತಪಾಸಣೆಯನ್ನೂ ನಡೆಸಲಾಗುತ್ತಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.