ಎಲಿವೇಟೆಡ್ ಕಾರಿಡಾರ್‌ ನಿರ್ಮಾಣಕ್ಕಾಗಿ ಆಸ್ತಿ ತೆರಿಗೆಯ ಮೇಲೆ ಹೆಚ್ಚುವರಿ ತೆರಿಗೆ

KannadaprabhaNewsNetwork |  
Published : Jun 26, 2026, 03:45 AM IST
Bengaluru

ಸಾರಾಂಶ

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಲಿವೇಟೆಡ್ ರೋಡ್ (ಎತ್ತರಿಸಿದ ರಸ್ತೆ) ನಿರ್ಮಾಣಕ್ಕೆ ಅಗತ್ಯವಿರುವ ಬಂಡವಾಳವನ್ನು ಹೊಂದಿಸಲು ಕಾರಿಡಾರ್ ಸಮೀಪದ ಸ್ವತ್ತುಗಳಿಗೆ ವಿಧಿಸುತ್ತಿರುವ ಆಸ್ತಿ ತೆರಿಗೆಯ ಮೇಲೆ ‘ಹೆಚ್ಚುವರಿ ತೆರಿಗೆ’ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ.

 ಬೆಂಗಳೂರು :  ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಲಿವೇಟೆಡ್ ರೋಡ್ (ಎತ್ತರಿಸಿದ ರಸ್ತೆ) ನಿರ್ಮಾಣಕ್ಕೆ ಅಗತ್ಯವಿರುವ ಬಂಡವಾಳವನ್ನು ಹೊಂದಿಸಲು ಕಾರಿಡಾರ್ ಸಮೀಪದ ಸ್ವತ್ತುಗಳಿಗೆ ವಿಧಿಸುತ್ತಿರುವ ಆಸ್ತಿ ತೆರಿಗೆಯ ಮೇಲೆ ‘ಹೆಚ್ಚುವರಿ ತೆರಿಗೆ’ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ.

ಮೊದಲ ಹಂತದಲ್ಲಿ ಹಳೇ ಮದ್ರಾಸ್ ರಸ್ತೆಯಲ್ಲಿನ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಿಸುತ್ತಿರುವ 11.65 ಕಿ.ಮೀ ಉದ್ದದ 4 ಪಥಗಳ ಎಲಿವೇಟೆಡ್ ರಸ್ತೆಗೆ ಸುಮಾರು 1,300 ಕೋಟಿ ರು. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ಭಾರಿ ವೆಚ್ಚದ ಈ ಯೋಜನೆಗೆ ಹಣ ಹೊಂದಿಸುವ ಸವಾಲು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಡಿಪಿಆರ್ ಸಿದ್ಧಪಡಿಸಿರುವ ಸಂಸ್ಥೆಯು ಹೆಚ್ಚುವರಿ ಆಸ್ತಿ ತೆರಿಗೆ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿದೆ.

ರಸ್ತೆ ನಿರ್ಮಾಣದಿಂದ ಅಕ್ಕ ಪಕ್ಕದಲ್ಲಿನ ಪ್ರದೇಶಗಳ ಆಸ್ತಿ ಮೌಲ್ಯ ಮತ್ತಷ್ಟು ಹೆಚ್ಚಳವಾಗುತ್ತದೆ. ಅಲ್ಲದೇ, ಈ ಭಾಗದಲ್ಲಿ ಓಡಾಡುವ ಜನರಿಗೆ ಅನುಕೂಲ ಆಗುತ್ತದೆ. ಸಂಪರ್ಕ ಸುಗಮಗೊಳ್ಳುವ ಕಾರಣ ವ್ಯಾಪಾರೋದ್ಯಮದಲ್ಲಿ ಅಭಿವೃದ್ಧಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕಾರಿಡಾರ್ ವ್ಯಾಪ್ತಿಯ ಆಸ್ತಿಗಳಿಗೆ ಸಣ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಬಹುದು ಎಂದು ಡಿಪಿಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆಸ್ತಿ ತೆರಿಗೆ ಹೆಚ್ಚಳದ ಕುರಿತು ಪ್ರಸ್ತಾವನೆ ಇದೆ. ಆದರೆ, ಈ ಕುರಿತು ಯಾವುದೇ ತೀರ್ಮಾನವಾಗಿಲ್ಲ ಎಂದು ಜಿಬಿಎ ಮೂಲಗಳು ಹೇಳಿವೆ.

ಟೋಲ್ ಇರುವುದಿಲ್ಲ: 

 ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ, 10 ಕಿ.ಮೀ ಮತ್ತು ಮೇಲ್ಪಟ್ಟು ಉದ್ದರ ರಸ್ತೆಗಳಲ್ಲಿ ಟೋಲ್ ಶುಲ್ಕ ವಿಧಿಸಲು ಅವಕಾಶವಿದೆ. ಉದ್ದೇಶಿತ ಎಲಿವೇಟೆಡ್ ರಸ್ತೆ 11.65 ಕಿ.ಮೀ ಉದ್ದ ಇದೆ. ಆದರೆ, ರಸ್ತೆಯ ಕೆಲವು ಕಡೆ ವಾಹನಗಳ ಸಂಚಾರಕ್ಕೆ ಅಪ್ ರ್‍ಯಾಂಪ್ ಮತ್ತು ಡೌನ್‌ ರ್‍ಯಾಂಪ್‌ಗಳನ್ನು ನಿರ್ಮಿಸಲಾಗುತ್ತದೆ. ಈ ಕಾರಣಕ್ಕೆ ಟೋಲ್ ವಿಧಿಸುವುದು ಕಾರ್ಯಸಾಧುವಲ್ಲ ಎಂದು ಡಿಪಿಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ರಸ್ತೆ ಟೋಲ್ ರಹಿತವಾಗಿರುವುದರಿಂದ ಸ್ವತ್ತುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾವನೆವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. 

ಕಾಮಗಾರಿ ಮುಗಿದ ಬಳಿಕ ಆಸ್ತಿ ತೆರಿಗೆ ಹೆಚ್ಚಳ

ಎಲಿವೇಟೆಡ್ ರಸ್ತೆ ಪೂರ್ಣಗೊಂಡು, ವಾಹನಗಳ ಸಂಚಾರಕ್ಕೆ ಮುಕ್ತಗೊಂಡ ನಂತರವಷ್ಟೇ ಅಕ್ಕ-ಪಕ್ಕದ ಪ್ರದೇಶಗಳ ಆಸ್ತಿಗಳಿಗೆ ಹೆಚ್ಚುವರಿ ತೆರಿಗೆ ತೆರಿಗೆ ವಿಧಿಸುವ ಪ್ರಸ್ತಾವನೆ ಇದೆ.

ಎತ್ತರಿಸಿದ ರಸ್ತೆ ಸಂಪರ್ಕಿಸುವ ಪ್ರಮುಖ ಪ್ರದೇಶಗಳು

ಓಲ್ಡ್ ಮದ್ರಾಸ್ ರಸ್ತೆ (ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ), ಇಂದಿರಾನಗರ 80 ಅಡಿ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಸಿ.ಎಂ.ಎಚ್ ರಸ್ತೆ, ಎಚ್.ಎ.ಎಲ್ ವಿಮಾನ ನಿಲ್ದಾಣ ರಸ್ತೆ, ಈಜಿಪುರ ಮುಖ್ಯ ರಸ್ತೆ, ಶ್ರೀನಿವಾಗಿಲು ಮುಖ್ಯ ರಸ್ತೆ (ಸೋನಿ ವರ್ಲ್ಡ್ ಸಿಗ್ನಲ್), ಸರ್ಜಾಪುರ ಮುಖ್ಯ ರಸ್ತೆ, ಮಡಿವಾಳ ಮುಖ್ಯ ರಸ್ತೆ, ಹೊಸೂರು ಮುಖ್ಯ ರಸ್ತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕ್ರಿಪ್ಟೋ ಕರೆನ್ಸಿ ಬದಲಾವಣೆ ನೆಪದಲ್ಲಿ ಟೆಕ್ಕಿ ಬಳಿ ದರೋಡೆ ಮಾಡಿದ್ದ 12 ಮಂದಿ ಬಂಧನ
₹75 ಕೋಟಿಯ 12 ಬಿಡಿಎ ಸೈಟ್‌ ಕಬಳಿಕೆ: ಪಾಲಿಕೆ ಮಾಜಿ ಸದಸ್ಯರ ವಿರುದ್ಧ ದೂರು