ಉಡುಪಿ ; ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಯಥಾವತ್ತಾಗಿ ಅನುಷ್ಠಾನ ಮಾಡಬೇಕು. ಅನುಷ್ಠಾನದಲ್ಲಿ ಸಮಸ್ಯೆಗಳಾದರೇ ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಈ ಯೋಜನೆಗಳಿಂದ ಅರ್ಹರು ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಯಡಿ ಪಡುಬಿದ್ರೆ - ನಿಟ್ಟೆ ಹಾಗೂ ಪಳ್ಳಿ - ಬೆಳ್ಳೆ ಮಾರ್ಗದಲ್ಲಿ ಸರ್ಕಾರಿ ಬಸ್ಸುಗಳನ್ನು ಓಡಿಸುವಂತೆ ಕಳೆದ ಸಭೆಗಳಲ್ಲಿ ಸೂಚಿಸಿದ್ದರೂ ಸಹ ಅಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ಈ ಬಗ್ಗೆ ಆರ್.ಟಿ.ಓ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಬೈಂದೂರುನಲ್ಲಿ ಕೆಲವು ಬಸ್‌ಗಳು ನಿಲ್ದಾಣವನ್ನು ಪ್ರವೇಶಿಸದೇ ಹೆದ್ದಾರಿಯಲ್ಲಿಯೇ ಪ್ರಯಾಣಿಕರನ್ನು ಇಳಿಸುತಿದ್ದಾರೆ, ಇದರಿಂದ ನಿಲ್ದಾಣಗಳಲ್ಲಿ ಕಾಯುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಎಲ್ಲಾ ಬಸ್‌ಗಳು ನಿಲ್ದಾಣಕ್ಕೆ ಹೋಗಲೇಬೇಕು ಎಂದರು.ಅನ್ನಭಾಗ್ಯ ಯೋಜನೆಯಡಿ ಈಗಾಗಲೇ ಶೇ. 84 ರಷ್ಟು ಪಡಿತರ ಚೀಟಿಗಳು ಇ-ಕೆವೈಸಿ ಆಗಿದ್ದು, ಜನರು ಸ್ವಯಂ “ಅನ್ನಸೇವೆ” ಆಪ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು, ಇದರಲ್ಲಿ ಶೇ 100 ಸಾಧನೆಯಾಗಬೇಕು ಎಂದರು.
ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಸೆಪ್ಟಂಬರ್‌ವರೆಗೆ 4.74 ಮಹಿಳಾ ಪ್ರಯಾಣಿಕರ 194.32 ಕೋಟಿ ರು. ಪ್ರಯಾಣ ವೆಚ್ಚವನ್ನು ಭರಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 2,13,236 ಮಹಿಳೆಯರಿಗೆ ಪ್ರತೀ ಮಾಹೆ 2 ಸಾವಿರ ರು.ಗಳಂತೆ 1451.36 ಕೋಟಿ ರು. ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,32,021 ಕುಟುಂಬಗಳು ಉಚಿತ ವಿದ್ಯುತ್ ಬಿಲ್ 788.02 ಕೋಟಿ ರು.ಗಳನ್ನು ಭರಿಸಲಾಗಿದೆ. ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯಡಿ 8,24,049 ಫಲಾನುಭವಿಗಳಿಗೆ ತಲಾ 5 ಕೆ.ಜಿ ಆಹಾರ ಧಾನ್ಯದ ಬದಲಾಗಿ 427.36 ಕೋಟಿ ರೂ. ಪಾವತಿಸಲಾಗಿದೆ ಹಾಗೂ ಯುವನಿಧಿ ಯೋಜನೆಯಡಿ 5401 ಅಭ್ಯರ್ಥಿಗಳಲ್ಲಿ 5016 ಫಲಾನುಭವಿಗಳಿಗೆ 13.67 ಕೋಟಿ ರು. ನೇರ ನಗದನ್ನು ವರ್ಗಾಯಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.