ಗ್ರಾಮೀಣ ರಸ್ತೆಗಳ ಸಮರ್ಪಕ ಅಭಿವೃದ್ಧಿ, ಹೆಚ್ಚಿನ ಸಾರಿಗೆ ಸೌಲಭ್ಯ ಕಲ್ಪಿಸಿ

KannadaprabhaNewsNetwork | Published : May 4, 2025 1:30 AM

ಸಾರಾಂಶ

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಶುದ್ಧ ಆಹಾರ ಕಲ್ಪಿಸಲು ತಾಪಂ ಇಒ, ಶಿಕ್ಷಣ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಜೊತೆ ಊಟ ಮಾಡುವ ಮೂಲಕ ನೈತಿಕ ಬಲ ತುಂಬಬೇಕು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ಗ್ರಾಮೀಣ ರಸ್ತೆಗಳ ಸಮರ್ಪಕವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಕೆಎಸ್‌ಆರ್‌ಟಿಸಿ ಘಟಕ ವ್ಯಸ್ಥಾಪಕರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಲಗೂರಿನಿಂದ ಮಳವಳ್ಳಿಯವರೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಗಾಗಿ ಗ್ರಾಮೀಣ ಸಾರಿಗೆಗಳನ್ನು ಹೆಚ್ಚು ಮಾಡಬೇಕು. ಮುಂದಿನ ದಿನಗಳಲ್ಲಿ 25ಕ್ಕೂ ಹೆಚ್ಚು ಬಸ್‌ಗಳು ಬರಲಿದ್ದು, ಮತ್ತಷ್ಟು ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಪತ್ರದ ಮೂಲಕ ಮನವಿ ಸಲ್ಲಿಸಿದರೇ ಇಲಾಖಾವಾರು ಸಚಿವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಶುದ್ಧ ಆಹಾರ ಕಲ್ಪಿಸಲು ತಾಪಂ ಇಒ, ಶಿಕ್ಷಣ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ವಸತಿ ಶಾಲೆಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಜೊತೆ ಊಟ ಮಾಡುವ ಮೂಲಕ ನೈತಿಕ ಬಲ ತುಂಬಬೇಕು ಎಂದರು.

ಮುಂದಿನ ಎರಡು ವರ್ಷಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿನುರಿತ ಶಿಕ್ಷಕರೊಂದಿಗೆ ಗುಣಮಟ್ಟದ ಶಿಕ್ಷಣ ಹಾಗೂ ಎಲ್ಲ ಸವಲತ್ತು ನೀಡಲಾಗುವುದು. ಕೆಲವೇ ತಿಂಗಳಲ್ಲಿ ಸರ್ಕಾರಿ ಶಾಲೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗುವುದು ಎಂದರು.

ಹಲಗೂರು ಹೋಬಳಿ ಮುತ್ತತ್ತಿ ಸೇರಿದಂತೆ ಅರಣ್ಯ ದಂಚಿನ ಗ್ರಾಮಗಳ ಜನರಿಗೆ ಅನುಕೂಲವಾಗಲು ಮೊಬೈಲ್ ಆಸ್ಪತ್ರೆ ಅನುಷ್ಠಾನ, ಸಂಚಾರಿ ಆರೋಗ್ಯ ಘಟಕಕ್ಕೆ ಬೇಕಾದ ಕಡತ ಸಿದ್ಧಪಡಿಸಲು ಆರೋಗ್ಯ ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪರಿಗೆ ಸಲಹೆ ನೀಡಿದರು. ಜನರ ಸಮಸ್ಯೆ ಆಲಿಸಲು ಅರಣ್ಯ ರಕ್ಷಾ ಸಮಿತಿ ಸಭೆ ನಡೆಸುವಂತೆ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಹೆದ್ದಾರಿಗಳಲ್ಲಿ ಬಾರ್‌ಗೆ ಹೋಗುವ ಸೂಚನಾ ಫಲಕವನ್ನು ತಕ್ಷಣ ತೆರವುಗೊಳಿಸಬೇಕು. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧ, ಹೋಟೆಲ್‌ಗಳು ಸೇರಿದಂತೆ ಇತರೆ ಕಡೆಗಳಲ್ಲಿ ಅನಧಿಕೃತ ಮಾರಾಟ ವಿರುದ್ಧವೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣದ ಸೆಸ್ಕ್ ಕಚೇರಿ ಎದುರಿನ ಹಳೆಯ ಸರ್ಕಾರಿ ಶಾಲೆ, ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಮಾಡಲು ತ್ವರಿತಗತಿಯಲ್ಲಿ ಮುಂದಾಗಬೇಕು. ಅಲ್ಲಿ ಪ್ರಜಾಸೌಧ ನಿರ್ಮಾಣವಾಗಲಿದೆ. ಅತ್ಯಂತ ಹಳೆದಾದ ಜೂನಿಯರ್ ಕಾಲೇಜು ಕಟ್ಟಡವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಪಕ್ಕದಲ್ಲಿ ನೂತನ ಪ್ರಥಮ ದರ್ಜೆ ಕಾಲೇಜು ಕಟ್ಟಡ ತಲೆ ಎತ್ತಲಿದೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸೋಮಶೇಖರ್ ಮಾತನಾಡಿ, 33 ಕೋಟಿ ಅನುದಾನದಲ್ಲಿ ಎಲ್ಲ ಕಾಮಗಾರಿಗಳು ಪ್ರಗತಿಯಲಿವೆ. ಈ ವರ್ಷ ಇಲಾಖೆಯಿಂದ 55 ಕೋಟಿ ಹಾಗೂ ಮುಖ್ಯಮಂತ್ರಿ ವಿಶೇಷ ಅನುದಾನದಡಿ 20 ಕೋಟಿ ಅನುದಾನ ಬಂದಿದೆ ಎಂದರು.

ತಾಲೂಕಿನ ತಳಗವಾದಿ, ಕೆಂಚನದೊಡ್ಡಿ, ಕಾಳಕೆಂಪನದೊಡ್ಡಿ, ಮಂಚನಕೊಪ್ಪಲು, ಕಲ್ಯಾಣಕೊಪ್ಪಲು, ಬೆಮನಹಳ್ಳಿ, ಕುಂತೂರು, ನಿಟ್ಟೂರು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಕಿರುಗಾವಲಿನಿಂದ ಮಳವಳ್ಳಿ ರಸ್ತೆಗೆ 14.80 ಕೋಟಿ ಬಿಡುಗಡೆಯಾಗಿದೆ. ಬೆಳಕವಾಡಿ ರಸ್ತೆ ಅಗಲೀಕರಣ ಸಂಬಂಧ ಮನೆಗಳ ಸ್ಥಳಾಂತರ ಹಾಗೂ ಪಟ್ಟಣದಲ್ಲಿ ಪ್ರಜಾಸೌಧಕ್ಕೆ ನೀಲಿನಕ್ಷೆ ಸಿದ್ಧವಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಮಧುರ ಮೂರ್ತಿ ಮಾತನಾಡಿ, ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷದಿಂದ ಸಾಕಷ್ಟು ಹಾನಿಯಾಗಿದೆ. ಈಗಾಗಲೇ 16 ಲಕ್ಷ ಪರಿಹಾರ ನೀಡಲಾಗಿದೆ. ಬೆಳಕವಾಡಿ ಭಾಗದಲ್ಲಿ ಆನೆಗಳ ನಿಯಂತ್ರಣಕ್ಕೆ ಹಾಗೂ ಚಿರತೆ ಹಾವಳಿ ತಡೆಗೆ ಮುಂದಾಗಬೇಕಿದೆ ಎಂದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಾಬು ಕೃಷ್ಣದೇವ್ ಮಾತನಾಡಿ, ಇಲಾಖೆ ವ್ಯಾಪ್ತಿ ಈಗಾಗಲೇ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಸಬೇಕು. ಹಲವು ಏತ ನೀರಾವರಿ ಯೋಜನೆಗಳ ಮೂಲಕ ಹೊಸದಾಗಿ ಕೆರೆಗಳಿಗೆ ನೀರು ತುಂಬಿಸುವುದು, ಮುಂದಿನ ದಿನಗಳಲ್ಲಿ 60 ರಿಂದ 70 ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗುವುದು. ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಟಿಗೆ ಮೀನುಗಾರಿಕೆ ಇಲಾಖೆ ಮುಂದಾಗಬೇಕು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಜುಬೀಯಾ ಖಾನಂ (623), ಕೆ.ಭುವನ (622), ಕೆ.ಸಿ.ನಿಸರ್ಗ (622) ಹಾಗೂ ಎಂ.ಎನ್.ದೀಪಿಕಾ (621) ಅವರನ್ನು ಶಾಸಕರು ಅಭಿನಂದಿಸಿದರು. ತಹಸೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ವಿ.ಕೃಷ್ಣಪ್ಪ, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಮಾದೇಶ್ ಇದ್ದರು.

Share this article