ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ವಿಶ್ವದಲ್ಲೇ ಎಲ್ಲೂ ಕಂಡರಿಯದ ೧೨ನೇ ಶತಮಾನದ ಶರಣ ಪರಂಪರೆಯ ಜೀವನಕ್ರಮದಲ್ಲಿ ಕಾಯಕ ಮತ್ತು ದಾಸೋಹಕ್ಕೆ ಆದ್ಯತೆಯಿತ್ತು. ಬಸವಣ್ಣನವರ ವಿಚಾರಧಾರೆಗಳು ವೈಜ್ಞಾನಿಕವಾಗಿ ಮತ್ತು ವೈಚಾರಿಕತೆಯ ನೆಲೆಹಟ್ಟಲ್ಲಿದ್ದು ನಾವೆಲ್ಲ ಅವುಗಳನ್ನು ನಿತ್ಯ ಅಳವಡಿಕೊಳ್ಳಬೇಕೆಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಜಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಮತ್ತು ತಾಲೂಕು ಮಟ್ಟದ ಸಮಿತಿಗಳ ಪದಗ್ರಹಣ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಗಳು ನಮ್ಮ ಬೌದ್ಧಿಕಮಟ್ಟ ಕೀಳಾಗಿಸಿ ಸಮಾಜವನ್ನು ನಿಷ್ಕ್ರಿಯ ಮಾಡುತ್ತಿವೆ. ೫ಜಿ ಮತ್ತು ಐಪಿಎಲ್ ನಮ್ಮನ್ನು ಬೌದ್ಧಿಕವಾಗಿ ದಿವಾಳಿಯಾಗಿಸುತ್ತಿವೆ. ಪ್ರಶ್ನಿಸುವ ಗುಣ ನಮ್ಮಲ್ಲಿ ಮಾಯವಾಗುತ್ತಿದ್ದು, ೪೫೦ಕ್ಕೂ ಹೆಚ್ಚಿನ ವಿರಕ್ತಮಠಗಳು ರಾಜ್ಯದಲ್ಲಿರುವುದರಿಂದ ನಾವೆಲ್ಲ ಶಿಕ್ಷಣ ಪಡೆಯುವಂತಾಗಿದೆ ಎಂದರು.
ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ ಮಾತನಾಡಿ, ಪರಿಷತ್ ಅಡಿ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರಗಳಲ್ಲಿ ನಿತ್ಯ ೧೫-೨೦ ಜನ ಉಚಿತ ಡಯಾಲಿಸಿಸ್ ಸೌಕರ್ಯ ಪಡೆಯುತ್ತಿದ್ದಾರೆ. ಪರಿಷತ್ ಸದಸ್ಯರು ೪೨ ಸಾವಿರಕ್ಕಿಂತ ಹೆಚ್ಚಿದ್ದು, ಮನೆಮನೆಗಳಿಗೆ ನಮ್ಮ ವಿಚಾರಧಾರೆಗಳು ತಲುಪುತ್ತಿವೆ. ನಾವು ದೇವರ ವಿರೋಧಿಗಳಲ್ಲ, ಬದಲಾಗಿ ಮೂಢನಂಬಿಕೆಗಳ ಪ್ರಬಲ ವಿರೋಧಿಗಳೆಂದರು. ರಾಜ್ಯದಲ್ಲಿ ೨೫೦ ವಿದ್ಯಾರ್ಥಿಗಳಿಂದ ₹೧೫ ಸಾವಿರ ವೆಚ್ಚದಲ್ಲಿ ಟೆಲಿಸ್ಕೋಪ್‌ಗಳ ನಿರ್ಮಿಸಲು ಯೋಜನೆ ರೂಪಿಸಿದ್ದು ಡಿಸೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವೈಜ್ಞಾನಿಕ ಮತ್ತು ವೈಚಾರಿಕ ಕಾರ್ಯಕ್ರಮಗಳ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತದೆಂದರು. ಚಿರಂಜೀವಿ ರೋಡಕರ್ ವಿರಚಿತ ಕೊಡಲಿ ಕಾವು ಕೃತಿ ಲೋಕಾರ್ಪಣೆಗೊಂಡಿತು. ನಗರದ ಗೋ ಸೇವಕ ಸಂತೋಷ ಆಲಗೂರ ಸೇರಿದಂತೆ ೩೫ ಜನರಿಗೆ ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿ ನೀಡಲಾಯಿತು.ಹಿರಿಯ ಸಾಹಿತಿ, ಲಾವಣಿಕಾರ ಬಿ.ಆರ್. ಪೋಲೀಸ್‌ಪಾಟೀಲ ಕೃತಿ ವಿಮರ್ಶಿಸಿದರು. ಶ್ರೀರಾಮಚಂದ್ರ, ಉಷಾ ಹಿರೇಮಠ, ಸುಧಾ ಹುಚ್ಚನ್ನವರ, ಚಿಕ್ಕ ಹನುಮಂತಗೌಡ, ದಾಕ್ಷಾಯಣಿ ಮಂಡಿ, ಡಾ.ಪ್ರಕಾಶ ಮಂಡಿ, ಸತೀಶ ಹಜಾರೆ, ಲಿಂಗಾನಂದ ಗವಿಮಠ, ಬಸವರಾಜ ಬಾಗೇನವರ, ಸಿದ್ದಪ್ಪ ಮೇಣಿ, ಜಿ.ಐ. ಹತ್ತಳ್ಳಿ, ಶ್ರೀಶೈಲ ಬುರ್ಲಿ, ಬಿ,ಡಿ, ನೇಮೇಗೌಡ ಸೇರಿದಂತೆ ಪ್ರಮುಖರಿದ್ದರು.