ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ಆದ್ಯತೆ: ವಿ. ಸೋಮಣ್ಣ

KannadaprabhaNewsNetwork | Published : May 4, 2025 1:30 AM

ಸಾರಾಂಶ

12 ಲಕ್ಷಕ್ಕೂ ಹೆಚ್ಚು ಕನ್ನಡ ಭಾಷೆಯ ನೌಕರರು ರೈಲ್ವೆ ಇಲಾಖೆಯಲ್ಲಿದ್ದಾರೆ. ಅವರಿಗೆ ಅನುಕೂಲವಾಗುವ ದೃಷ್ಟಿಯಿಂದಲೇ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಮಾಡಿದ ಮನವಿಗೆ ಪ್ರಧಾನಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕೊಟ್ಟೂರು: ಕೊಟ್ಟೂರು ಉಜ್ಜಯನಿ ಮೂಲಕ ಚಿತ್ರದುರ್ಗ ನೂತನ ರೈಲು ಮಾರ್ಗಕ್ಕೆ ಸರ್ವೇ ಕಾರ್ಯ ಕೈಗೊಳ್ಳಲು ಆದೇಶ ನೀಡುತ್ತೇನೆ. ಅಲ್ಲದೆ ಶೀಘ್ರದಲ್ಲಿ ಜಗದ್ಗುರುಗಳ ಮತ್ತು ಈ ಭಾಗದ ಜನತೆಯ ಬೇಡಿಕೆ ರೈಲು ಮಾರ್ಗವನ್ನು ಆರಂಭಿಸಲು ಕ್ರಮ ಕೈಗೊಳ್ಳುವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ತಾಲೂಕಿನ ಉಜ್ಜಯಿನಿಯಲ್ಲಿ ಶನಿವಾರ ನಡೆದ ಶಿಖರ ತೈಲಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಭಾಗದ ಜನತೆಯ ಅನುಕೂಲಕ್ಕಾಗಿ ಮತ್ತು ಕೊಟ್ಟೂರು ಉಜ್ಜಯಿನಿ ಧಾರ್ಮಿಕ ಕ್ಷೇತ್ರಗಳಿಂದ ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರಿಗೆ ಬಹು ಅನುಕೂಲವಾಗುವ ದೃಷ್ಟಿಯಿಂದ ಜಗದ್ಗುರುಗಳು ಹೇಳಿದ್ದು, ಇದನ್ನು ತಪ್ಪದೇ ಜಾರಿ ಮಾಡುತ್ತೇನೆ. ಕೊಟ್ಟೂರು ಮಾರ್ಗವಾಗಿಯೂ ಬೇಡಿಕೆಯಂತೆ ರೈಲ್ವೆ ಸಂಚಾರದ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

12 ಲಕ್ಷಕ್ಕೂ ಹೆಚ್ಚು ಕನ್ನಡ ಭಾಷೆಯ ನೌಕರರು ರೈಲ್ವೆ ಇಲಾಖೆಯಲ್ಲಿದ್ದಾರೆ. ಅವರಿಗೆ ಅನುಕೂಲವಾಗುವ ದೃಷ್ಟಿಯಿಂದಲೇ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಮಾಡಿದ ಮನವಿಗೆ ಪ್ರಧಾನಿಗಳು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ 10 ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಗೂ ಅವಕಾಶ ನೀಡಿದೆ ಎಂದರು.

ನಮ್ಮ ರಾಜ್ಯದಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಕೈಗೊಳ್ಳಲು ರೈಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಸ್ಥಗಿತವಾಗಿದ್ದ 45 ಕೋಟಿಗಳ 11 ರೈಲ್ವೆ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಅಲ್ಲದೇ ಸ್ಥಗಿತವಾಗಿದ್ದ 45 ರೈಲ್ವೆ ಮಾರ್ಗಗಳಿಗೆ ಚಾಲನೆ ನೀಡಿದೆ. ತಳಕವಾಡಿ, ಕುಷ್ಟಗಿ, ಹುಬ್ಬಳ್ಳಿ ಮಾರ್ಗದ ರೈಲ್ವೆಗೆ ಏ. 14ರಂದು ಹಸಿರು ನಿಶಾನೆ ತೋರಲಾಗುತ್ತಿದೆ. ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ಮಾರ್ಗಕ್ಕೆ ಭೂಮಿ ಪಡೆಯುವ ಕೆಲಸ ಮುಗಿದಿದ್ದು, ಕಾಮಗಾರಿ ಆರಂಭಿಸಲಾಗುವುದು. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ನೀಡಬೇಕಾದ ಅನುದಾನದ ಪಾಲು ಸಿಗುತ್ತಿಲ್ಲ. ಹೀಗಾಗಿ ರೈಲ್ವೆ ಮೇಲ್ಸುತುವೆಗೆ ಕೇಂದ್ರವೇ ಶೇ. 100ರಷ್ಟು ವೆಚ್ಚ ಭರಿಸುತ್ತಿದೆ. ರಾಜ್ಯದ 46 ರೈಲ್ವೆ ನಿಲ್ದಾಣಗಳನ್ನು ₹2 ಸಾವಿರ ಕೋಟಿಗಳಲ್ಲಿ ಮೇಲ್ದರ್ಜೆಗೇರಿಸಿದೆ ಎಂದು ಹೇಳಿದರು.

ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು ಉಜ್ಜಯನಿ ಪೀಠದ ಪರವಾಗಿ ಸಚಿವ ವಿ. ಸೋಮಣ್ಣ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರನ್ನು ಸನ್ಮಾನಿಸಿ, ಆಶೀರ್ವದಿಸಿದರು. ಚಾನುಕೋಟಿ, ಹರಪನಹಳ್ಳಿ, ಕೂಡ್ಲಿಗಿ, ಬೆಣ್ಣೆಹಳ್ಳಿ ಶ್ರೀಗಳು ಸೇರಿದಂತೆ ಅನೇಕ ಶಿವಾಚಾರ್ಯರು ಇತರರು ಇದ್ದರು.

Share this article