ಪುಣ್ಯದಹುಂಡಿಯಲ್ಲಿ ಕರುಗಳ ಪ್ರದರ್ಶನ । ಉತ್ತಮ ೧೦ ಕರುಗಳಿಗೆ ಬಹುಮಾನ ವಿತರಣೆ ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಪಣ್ಯದಹುಂಡಿಯಲ್ಲಿ ಜಿಲ್ಲಾ ಹಾಲು ಒಕ್ಕೂಟ, ಪಣ್ಯದಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಮಿಶ್ರ ತಳಿ ಕರುಗಳ ಪ್ರದರ್ಶನ ಮತ್ತು ಉತ್ತಮ ಕರುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಸೇರಿ ಹತ್ತು ಕರುಗಳಿಗೆ ನಗದು ಬಹುಮಾನ ನೀಡಿ ಅವರು ಮಾತನಾಡಿದರು.
ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು, ಹೈನು ಉದ್ಯಮವನ್ನು ಬೆಳೆಸುವ ಜೊತೆಗೆ ಹಸುಗಳನ್ನು ವೈಜ್ಞಾನಿಕವಾಗಿ ಪಾಲನೆ ಮಾಡುವ ಗುಣಮಟ್ಟದ ಹಾಲು ಪಡೆದುಕೊಳ್ಳಲು ಮುಂದಾಗಬೇಕು. ಕರು ಹುಟ್ಟಿದ ದಿನದಂದಲೇ ಅದನ್ನು ಪಾಲನೆ ಪೋಷಣೆ ಮಾಡುವ ವಿಧಾನವನ್ನು ಅನುಸರಿಸಿ, ಉತ್ತಮ ರಾಸು ಮಾಡುವ ಜವಾಬ್ದಾರಿಯು ನಿಮ್ಮದಾಗಿದೆ. ಈ ನಿಟ್ಟಿನಲ್ಲಿ ಚಾಮುಲ್ ವತಿಯಿಂದ ಉತ್ತಮ ಕರುಗಳ ಪ್ರದರ್ಶನ ಬಹಳ ಯಶಸ್ವಿಯಾಗಿ ನಡೆದಿದೆ. ೯೦ ಕರುಗಳು ಪ್ರದರ್ಶನಕ್ಕೆ ಆಗಮಿಸಿವೆ. ಎಲ್ಲವು ಉತ್ತಮ ಕರುಗಳಾಗಿದ್ದು, ಇವುಗಳಲ್ಲಿ ಉತ್ತಮ ಕರುವನ್ನು ತಜ್ಞ ವೈದ್ಯರ ತಂಡ ಆಯ್ಕೆ ಮಾಡಿದೆ ಎಂದರು.ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ಕರು ಹುಟ್ಟಿದ ತಕ್ಷಣ ಗಿಣ್ಣು ಹಾಲು ಕುಡಿಸಲು ಮುಂದಾಗಬೇಕು. ಜಂತು ಹುಳು ಮಾತ್ರೆಗಳನ್ನು ನೀಡುವುದು, ಖನಿಜ ಮಿಶ್ರಣಗಳನ್ನು ಹಸುವಿನ ಜೊತೆಗೆ ಕರುವಿಗೆ ಕಾಲ ಕಾಲಕ್ಕೆ ತಕ್ಕಂತೆ ನೀಡುವ ಮೂಲಕ ಉತ್ತಮ ರೀತಿಯಲ್ಲಿ ಕರುಗಳನ್ನು ಪೋಷಣೆ ಮಾಡಬೇಕು. ಇದರಿಂದ ರೈತರಿಗೆ ಆರ್ಥಿಕ ಲಾಭವಾಗುತ್ತದೆ ಎಂದರು.
ಸಮಾಧಾನಕರ ಬಹುಮಾನವಾಗಿ ಪುಣ್ಯದಹುಂಡಿ ಮಹೇಂದ್ರ, ಕರಿನಂಜನಪುರ ಶಾಂತಮೂರ್ತಿ, ನಲ್ಲೂರು ಶಿವಯ್ಯ, ನಾಗವಳ್ಳಿ ಸಿದ್ದಶೆಟ್ಟಿ, ಪುಟ್ಟನಪುರ ಮಹೇಶ್, ಬುದಂಬಳ್ಳಿ ಮಹೇಶ್ ಅವರಿಗೆ ತಲಾ ೨ ಸಾವಿರ ರು. ನೀಡಲಾಯಿತು.
ಕಾರ್ಯಕ್ರಮದಲ್ಲಿ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜಕುಮಾರ್, ಶೇಖರಣ ಮತ್ತು ಪರಿಕರಣೆ ವಿಭಾಗದ ವ್ಯವಸ್ಥಾಪಕ ಶರತ್‌ಕುಮಾರ್, ಸಹಾಯಕ ವ್ಯವಸ್ಥಾಪಕ ಡಾ.ಎನ್.ಅಮರ್, ಡಾ.ನವೀನ್, ತಾಲೂಕಿನ ಮಾರ್ಗ ವಿಸ್ತರಣಾಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.