ಸಮರ್ಪಕವಾಗಿ ಬರ ನಿರ್ವಹಿಸಿ, ಅಧಿಕಾರಿಗಳಿಗೆ ಡಿಸಿ ಸೂಚನೆ

KannadaprabhaNewsNetwork |  
Published : Jan 23, 2024, 01:49 AM IST
ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್‌ ಮಾತನಡಿದರು. | Kannada Prabha

ಸಾರಾಂಶ

ಗದಗ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ಸ್ಥಿತಿಗತಿಯ ಜೊತೆಗೆ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ಗದಗ: ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರು ಮೇವಿನ ಸ್ಥಿತಿಗತಿಯ ಜೊತೆಗೆ ಬರ ನಿರ್ವಹಣೆಯನ್ನು ಸಮರ್ಪಕವಾಗಿ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಕುಡಿಯುವ ನೀರು, ಮೇವಿನ ಸ್ಥಿತಿಗತಿ ಮತ್ತು ಬರ ನಿರ್ವಹಣೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಅಧಿಕಾರಿ ವರ್ಗ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ತೊಂದರೆಗೊಳಗಾದ ಗ್ರಾಮಗಳನ್ನು ಈಗಾಗಲೇ ಗುರುತಿಸಿದ್ದು ಯಾವುದೇ ಕಾರಣಕ್ಕೂ ಜಿಲ್ಲೆಯ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಜರುಗಿಸಬೇಕೆಂದು ತಿಳಿಸಿದರು.ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್‍ಗಳ ಸಹಾಯದ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಬ್ಯಾಂಕ್‍ಗಳಲ್ಲಿ ಸಮರ್ಪಕ ಮೇವಿನ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.ಜ. 22ರಿಂದ ಫೆ.1ರ ವರೆಗೆ ನವೀಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆಕಾಲುವೆಯ ಮೂಲಕ ನೀರು ಬಿಡುಗಡೆಯಾಗುತ್ತಿದೆ. ಕಾಲುವೆಯ ಪಾತ್ರದಲ್ಲಿ ಜನ ಜಾನುವಾರುಗಳನ್ನು ಬಿಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸಂಬಂಧಿತ ತಹಸೀಲ್ದಾರರಿಗೆ ಸೂಚನೆ ನೀಡಿ, ನೀರು ಬಿಡುತ್ತಿರುವುದು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ. ಕಾಲುವೆ ಪಾತ್ರದಲ್ಲಿರುವ ರೈತ ಬಾಂಧವರು ನೀರನ್ನು ಪಂಪ್‍ಸೆಟ್‍ಗಳ ಮೂಲಕ ನೀರೆತ್ತಿ ಬೆಳೆಗಳಿಗೆ ಹಾಯಿಸಬಾರದು. ಈ ಕುರಿತು ತಹಸೀಲ್ದಾರ್‌ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಕುಡಿಯುವ ಉದ್ದೇಶಕ್ಕಾಗಿ ನವಿಲು ತೀರ್ಥ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದು ರೋಣ ತಾಲೂಕಿನ ಜಿಗಳೂರು, ಅಸೂಟಿ ಮತ್ತು ಹೊಳೆಆಲೂರು ಕೆರೆಗಳನ್ನು ಕುಡಿಯುವ ಉದ್ದೇಶಕ್ಕಾಗಿ ನೀರು ಸಂಗ್ರಹಿಸಬೇಕು. ಈ ಬಗ್ಗೆ ತಾಲೂಕಿನ ತಹಸೀಲ್ದಾರ್‌ ಹಾಗೂ ಇನ್ನುಳಿದ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಗಾ ವಹಿಸುವಂತೆ ತಿಳಿಸಿದರು.

ಪ್ರಸ್ತುತ ಜಲಾಶಯಗಳಲ್ಲಿ ಹಿಂದಿನ ವರ್ಷಕ್ಕಿಂತ ನೀರಿನ ಪ್ರಮಾಣ ಕಡಿಮೆ ಇದ್ದು ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆಯನ್ನು ಮನಗಂಡು ಈಗ ಹರಿಬಿಡಲಾಗುವ ನೀರನ್ನು ಪೋಲಾಗದಂತೆ ಸಂಗ್ರಹಿಸಿಕೊಂಡು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಕ್ರಮ ವಹಿಸಬೇಕು. ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ದಿನಗಳಲ್ಲಿ ಕಾಲುವೆಗುಂಟ ಅಳವಡಿಸಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ರೈತರು ಬೆಳೆಗಳಿಗೆ ನೀರು ಬಳಸದಂತೆ ಜಾಗೃತೆ ವಹಿಸಬೇಕು ಎಂದರು.

ತಾಲೂಕು ವಾರು ತಹಸೀಲ್ದಾರ್‌ರು ಪ್ರತಿ 15 ದಿನಕ್ಕೊಮ್ಮೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ ಬಗ್ಗೆ ಕಚೇರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಉಪವಿಭಾಗಧಿಕಾರಿ ಡಾ. ವೆಂಕಟೇಶ್ ನಾಯಕ್, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟೆಮನಿ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ಪಿ.ಆರ್.ಇ.ಡಿ ಕಾರ್ಯಪಾಲಕ ಅಭಿಯಂತರ ಎಸ್.ಆರ್. ಗೌಡರ, ತಾಲೂಕು ತಹಸೀಲ್ದಾರ್‌ರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...