ಸಂವಿಧಾನ ಜಾಗೃತಿ ಜಾಥಾ ಸಂಚಾರ ಯಶಸ್ಸಿಗೆ ಸಹಕರಿಸಿ: ಜಿಪಂ ಸಿಇಒ ಕುರೇರ್‌

KannadaprabhaNewsNetwork | Published : Jan 23, 2024 1:49 AM

ಸಾರಾಂಶ

ಬಾಗಲಕೋಟೆ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಶಶಿಧರ ಕುರೇರ್‌ ಮಾತನಾಡಿ, ಜ.26ರಂದು ಜಾಥಾ ವಾಹನಕ್ಕೆ ಚಾಲನೆ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಚಾಲನೆ ನೀಡಲಿದ್ದು, ಬಾಗಲಕೋಟೆ ಮತ್ತು ಜಮಖಂಡಿ ಉಪವಿಭಾಗಗಳ ಗ್ರಾಪಂಚಾಯತಿ ಮತ್ತು ನಗರ ಪ್ರದೇಶದಲ್ಲಿಯೂ ಜಾಥಾ ಸಂಚರಿಸಲಿದೆ ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಜ.26 ರಿಂದ ಫೆ.23ರವರೆಗೆ ಜಿಲ್ಲೆಯಲ್ಲಿ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥಾಗೆ ಎಲ್ಲರೂ ಸಹಕರಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಅವರು ಜ.26ರಂದು ಸಂವಿಧಾನ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಲಿದ್ದು, ಬಾಗಲಕೋಟೆ ಮತ್ತು ಜಮಖಂಡಿ ಉಪವಿಭಾಗಗಳ ಗ್ರಾಮ ಪಂಚಾಯತಿ ಮತ್ತು ನಗರ ಪ್ರದೇಶದಲ್ಲಿಯೂ ಜಾಗೃತಿ ಜಾಥಾ ಸಂಚರಿಸಲು ಈಗಾಗಲೇ ರೂಟ್ ಮ್ಯಾಪ್ ತಯಾರಿಸಲಾಗಿದೆ ಎಂದರು.

ಸ್ತಬ್ಧಚಿತ್ರ ಹಾಗೂ ಎಲ್ಇಡಿ ಒಳಗೊಂಡ ಎರಡು ಪ್ರತ್ಯೇಕ ವಾಹನಗಳು ಪ್ರತಿದಿನ 4 ರಿಂದ 5 ಪಂಚಾಯತಿಗಳಲ್ಲಿ ಸಂಚರಿಸಿ ಎಲ್ಲರ ಸಹಕಾರದೊಂದಿಗೆ ಸಂವಿಧಾನ ಆಶಯಗಳ ಕುರಿತು ಜಾಗೃತಿ ಮೂಡಿಸಲಿವೆ. ಸರ್ಕಾರಿ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ಬೋಧಿಸುವ ಉಪನ್ಯಾಸಕರು ಜನಸಾಮಾನ್ಯರಿಗೆ ಸಂವಿಧಾನದ ಮಹತ್ವ ಮನಮುಟ್ಟುವಂತೆ ತಿಳಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಜಾಗೃತಿ ಜಾಥಾ ಯಶಸ್ವಿಯಾಗಲು ಎಲ್ಲರ ಸಹಭಾಗಿತ್ವ ಬಹುಮುಖ್ಯವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಸಿದ್ಧತೆಯಲ್ಲಿರಬೇಕು. ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸಭೆ ಜರುಗಿಸಿ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಿ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸಬೇಕು. ಜನಾಕರ್ಷಣೆಗೆ ವಿವಿಧ ಜಾನಪದ ಕಲಾ ತಂಡಗಳು ಜೋತೆಗಿರಲಿವೆ. ಜಾಥಾ ಸಂದರ್ಭದಲ್ಲಿ ಕರಪತ್ರ, ಸಂವಿಧಾನ ಪೀಠಿಕೆಯ ಝರಾಕ್ಸ್ ಪ್ರತಿಗಳನ್ನು ವಿತರಿಸಲು ಕ್ರಮವಹಿಸಿ ಎಂದು ತಿಳಿಸಿದರು.

ಜಾಗೃತಿ ಜಾಥಾ ಸಂಚರಿಸಿ ಜನ ಸಮಾನ್ಯರಿಗೆ ಅರಿವು ಮೂಡಿಸುವ ಸಂದರ್ಭದಲ್ಲಿ ಸ್ಥಳೀಯ ಸಂಘಟನೆಗಳು ಸಡಗರದಿಂದ ಪಾಲ್ಗೊಂಡು ಹಬ್ಬದ ರೀತಿಯಲ್ಲಿ ಆಚರಿಸಿ ಯಶಸ್ವಿಗೊಳಿಸಲು ಸಹಕಾರ ನೀಡುವುದರ ಜೊತೆಗೆ ಯಾವುದೇ ವಿವಾದ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದರು.

ಸಭೆಯುಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Share this article