ಉಚ್ಚಾಟಿತರ ಬಗ್ಗೆ ರಾಜ್ಯ ನಾಯಕರ ನಿರ್ಧಾರಕ್ಕೆ ಬದ್ಧ

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಮಾಜಿ ಶಾಸಕರು, ಪುತ್ರರ ಬಗ್ಗೆ ಬಗ್ಗೆ ಮೃದು ಧೋರಣೆವ್ಯತ್ಯಾಸ ಮರೆತು ಲೋಕಸಭೆ ಗೆಲ್ಲುವ ಗುರಿ: ವೀರೇಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಜಿ ಶಾಸಕರು, ಪುತ್ರರೂ ಸೇರಿದಂತೆ ಪಕ್ಷದಿಂದ ಉಚ್ಚಾಟಿತರ ವಿಚಾರದಲ್ಲಿ ರಾಜ್ಯ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಿದ್ದು, ನಮ್ಮಲ್ಲಿನ ಕೆಲವೊಂದು ವ್ಯತ್ಯಾಸ, ಗೊಂದಲಗಳನ್ನೆಲ್ಲಾ ಮರೆತು, ಮುಂಬರುವ ಲೋಕಸಭೆ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು, ಪುತ್ರರು ಸೇರಿದಂತೆ ಉಚ್ಚಾಟನೆಗೊಳಿಸಿರುವ ಆದೇಶವನ್ನು ರಾಜ್ಯ ನಾಯಕರು ಹಿಂಪಡೆದರೆ ಸ್ವಾಗತಿಸುತ್ತೇವೆ. ಜಿಲ್ಲೆಯ ವಿಚಾರದಲ್ಲಿ ನಮ್ಮ ನಾಯಕರು ಕೈಗೊಳ್ಳುವ ಯಾವುದೇ ನಿಲುವು, ತೀರ್ಮಾನಗಳಿಗೆ ನಾವು ಬದ್ಧ ಎಂದರು.

ಒಂದು ಮನೆಯೆಂದಾಗ ಸಣ್ಣಪುಟ್ಟ ಮನಸ್ತಾಪ, ಗೊಂದಲ, ವ್ಯತ್ಯಾಸಗಳೆಲ್ಲಾ ಸಹಜ. ಅಂದ ಮೇಲೆ ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಕೆಲವೊಂದಿಷ್ಟು ವ್ಯತ್ಯಾಸ ಸಹಜ. ಅದನ್ನೆಲ್ಲಾ ಮರೆತು, ಲೋಕಸಭೆ ಚುನಾವಣೆ ಗೆಲುವನ್ನೇ ಗುರಿಯಾಗಿಟ್ಟುಕೊಂಡು ನಾವು ಕೆಲಸ ಮಾಡಲಿದ್ದೇವೆ, ದಾವಣಗೆರೆ ಸೇರಿದಂತೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲುವ ಗುರಿ ನಮ್ಮದು ಎಂದು ಅವರು ಹೇಳಿದರು.

ವಿಧಾನಸಭೆ ಚುನಾವಣೆ ಸೋಲಿನ ನಂತರ ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಅಸಮಾಧಾನ ಇವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರ ವಹಿಸಿಕೊಂಡಿದ್ದಾರೆ. ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸಂಘಟನೆ ಬಲಿಷ್ಟವಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮತ್ತೆ ನರೇಂದ್ರ ಮೋದಿಯವರಿಗೆ ಪ್ರಧಾನಿ ಮಾಡುವ ಗುರಿ ನಮ್ಮದು ಎಂದು ಅವರು ತಿಳಿಸಿದರು.

ಸುಳ್ಳು ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನ ಬಗ್ಗೆ ಜನ ರೋಸಿ ಹೋಗಿದ್ದಾರೆ. ನಿರುದ್ಯೋಗಿ ಪದವೀಧರರು, ಯುವಕರಿಗೆ ಇನ್ನೂ ನಿರುದ್ಯೋಗ ಭತ್ಯೆ ನೀಡಿಲ್ಲ. ಉಚಿತ ಬಸ್ಸು ಪ್ರಯಾಣ, ಅಕ್ಕಿ ಯೋಜನೆ ಜನ ಬೇಸತ್ತಿದ್ದಾರೆ. ಉಚಿತ ವಿದ್ಯುತ್ ಇರಲಿ, ಸಮರ್ಪಕವಾಗಿ ನಗ

ರ, ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಸಹ ಪೂರೈಸದ ಸರ್ಕಾರ ಇದು ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.ಗ್ಯಾರಂಟಿ ಸುಳ್ಳು ಭರವಸೆಗಳನ್ನು ಈಡೇರಿಸುವಲ್ಲೇ ಕಾಂಗ್ರೆಸ್ ಸರ್ಕಾರ ಹೊಯ್ದಾಡುತ್ತಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರೆಲ್ಲಾ ತಮ್ಮ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ಸಿಎಂ ಆಗಲು ಡಿ.ಕೆ.ಶಿವಕುಮಾರ, ಸತೀಶ ಜಾರಕಿಹೊಳಿ, ಡಾ.ಜಿ. ಪರಮೇಶ್ವರ ಒಳಗೊಳಗೆ ಪ್ರಯತ್ನ ನಡೆಸಿದ್ದಾರೆ. ಇಂತಹ ಸರ್ಕಾರದ ಬಗ್ಗೆ ಜನ ಭ್ರಮನಿರಸನರಾಗಿದ್ದಾರೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ಸಿನ ಗೆದ್ದ ಶಾಸಕರ ಪಾಡಂತೂ ಹೇಳತೀರದು. ಸದ್ಯಕ್ಕೆ ಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿ ಹೋದಲ್ಲೆಲ್ಲಾ ಹಾರ ತುರಾಯಿ ಹಾಕಿಸಿಕೊಳ್ಳುತ್ತಿರುವ ತಮಗೆ ಇನ್ನು ನಾಲ್ಕೈದು ತಿಂಗಳ ನಂತರ ಜನರಿಗೆ ಏನು ಹೇಳಬೇಕೆಂಬುದೇ ತೋಚುತ್ತಿಲ್ಲ. ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಎಲ್ಲಾ ಅನುದಾನ, ಅಭಿವೃದ್ಧಿ ಕಾರ್ಯ ಕುಂಠಿತಗೊಳಿಸಿದೆ. 130ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಿಸಿದ ಜನರಿಗೆ ಏನು ಉತ್ತರಿಸಬೇಕೆಂಬ ಅಸಹಾಯಕತೆಯನ್ನು ಕೆಲ ಕಾಂಗ್ರೆಸ್ಸಿನ ತಮ್ಮ ಆಪ್ತ ಶಾಸಕರು ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಭ್ರಷ್ಟಾಚಾರ ಬಟಾಬಯಲಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವತಃ ರಾಜ್ಯದ ಗುತ್ತಿಗೆದಾರರೆ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾರು ಯಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟಿದ್ದೇವೆಂಬುದಾಗಿ ಗುತ್ತಿಗೆದಾರರು ಹೇಳಿಕೆ ನೀಡುತ್ತಿರುವುದನ್ನು, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ಸಿನ ಹಿರಿಯ ನಾಯಕರ ರಾಜಕೀಯ ಚಟುವಟಿಕೆ ಗಮನಿಸಿದರೆ, ಈ ಸರ್ಕಾರಕ್ಕಂತೂ ಆಯಸ್ಸು ಇಲ್ಲವೆಂಬುದು ಸ್ಪಷ್ಟವಾಗುತ್ತದೆ ಎಂದು ಎಸ್.ಎಂ. ವೀರೇಶ ಹನಗವಾಡಿ ತಿಳಿಸಿದರು.

Share this article