ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ತಿರ್ಮಾನ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಭೋವಿ ಗುರುಪೀಠವು ಪ್ರತಿ ವರ್ಷ ನಡೆಸುವ ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಗುರುಗಳ ಹುಟ್ಟುಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜು.18 ರಂದು ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಮಾಜದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು. ಸಮಾಜದ ಸಂಘಟನೆಯ ದೃಷ್ಟಿಯಿಂದ ಭೋವಿ ಜನೋತ್ಸವವನ್ನು ಅದ್ಧೂರಿಯಾಗಿ ನಡೆಸಬೇಕು, ನೂತನವಾಗಿ ಆಯ್ಕೆಗೊಂಡ ಸಂಸದರು, ನಿಗಮ ಮಂಡಳಿ ಅಧ್ಯಕ್ಷರ ಗೌರವ ಸಮರ್ಪಣೆ ಮತ್ತು ನೂತನವಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಅಭ್ಯರ್ಥಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ನಡೆಸಲು ಸಭೆಯಲ್ಲಿ ನಿರ್ಣಯಿಸಿತು.
ಸಮಾಜದ ಮುಖಂಡ ಹಾಗೂ ವಕೀಲ ಶಂಕರಪ್ಪ ಮಾತನಾಡಿ, ಭೋವಿ ಸಮಾಜಕ್ಕೆ ಮೀಸಲಾತಿ ತಪ್ಪಿಸಲು ನಡೆದ ಕಾನೂನು ಹೋರಾಟ ಮತ್ತು ಭೋವಿ ಅವರಿಗೆ ಮೀಸಲು ನೀಡಬಾರದೆಂದು ನಡೆದ ಪಿತೂರಿಗಳಿಗೆ ಈಗ ಕಾನೂನಿನಲ್ಲಿಯೇ ಹಿನ್ನಡೆಯಾಗಿದೆ. ಅದೃಷ್ಟಾವಶಾತ್ ನಾವೀಗ ನೆಮ್ಮದಿಯಿಂದ ಇರಬೇಕಿದೆಯಾದರೂ ಸಂಘಟಿತರಾಗುವುದು ಅನಿವಾರ್ಯವಾಗಿದೆ ಎಂದು ಸಲಹೆ ನೀಡಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಭೋವಿ ಸಮಾಜವನ್ನು ಕಟ್ಟುವ ಕೆಲಸ ಬಹು ಕ್ಲಿಷ್ಟಕರವಾಗಿರುವಂತಹದು. ಕಳೆದ ಮೂರು ದಶಕಗಳಿಂದ ಗಮನಿಸಿರುವ ಅನುಭವ ಹಂಚಿಕೊಳ್ಳುತ್ತಿರುವೆ. ಭೋವಿ ಗುರುಪೀಠದ ಜಗದ್ಗುರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಜವನ್ನು ಸಂಘಟಿಸಿದ ಪರಿಣಾಮ ನಾನಿಂದು ಮಂತ್ರಿಯಾಗಿರುವೆ. ಭೋವಿ ನಿಗಮ ಸ್ಥಾವನೆಯಾಗಿದೆ. ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ಆಯಾಕಟ್ಟಿನ ಜಾಗದಲ್ಲಿ ಅಧ್ಯಕ್ಷರು ನಿರ್ದೇಶಕರು ನೇಮಕಗೊಳ್ಳುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಆಪ್ತ ವಲಯದ ಶ್ರೀಗಳಾಗಿ ಗುರುತಿಸಿಕೊಂಡಿದ್ದಾರೆ. ಪರಿಣಾಮ ಕೆಪಿಎಸ್‌ಸಿ ಸದಸ್ಯರ ನೇಮಕವಾಗುತ್ತಿದೆ. ಇಮ್ಮಡಿ ಶ್ರೀಗಳ ಸಮಾಜ ಬದ್ಧತೆಯಿಂದಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯ ಹಾಗೂ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ.