ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಸೊರಬ
ಮಾನವ ತನ್ನ ಬದುಕು ಕಟ್ಟಿಕೊಳ್ಳಲು ಪರಿಸರದ ಮೇಲೆ ನಿರಂತರ ದಾಳಿ ನಡೆಸುವುದು ಸರಿಯಲ್ಲ. ತನ್ನ ಅಗತ್ಯಕ್ಕೆ ಎಷ್ಟು ಬೇಕು ಎನ್ನುವುದನ್ನು ಅರಿತು ಉಪಯೋಗಿಸಿಕೊಂಡಾಗ ಮನುಜಕುಲಕ್ಕೆ ಒಳಿತಾಗುತ್ತದೆ ಮತ್ತು ಪರಿಸರ ಸಮತೋಲನತೆ ಕಾಯ್ದುಕೊಳ್ಳಬಹುದು ಎಂದು ಜಡೆ ಸಂಸ್ಥಾನ ಮಠ ಹಾಗೂ ಮುರುಘಾ ಮಠದ ಡಾ.ಮಹಾಂತ ಸ್ವಾಮಿಗಳು ನುಡಿದರು.ಶುಕ್ರವಾರ ಪಟ್ಟಣದ ಮುರುಘಾ ಮಠದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಬದುಕು ಪರಸರದ ಮೇಲೆಯೇ ಅವಲಂಬಿತವಾಗಿದೆ. ಇಂದು ಹಲವು ಕಾರಣಗಳಿಂದ ಮತ್ತು ಲಾಲಾಸೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸಿ, ಪೂಜಿಸಿದಷ್ಟು ನಮಗೆ ಒಳಿತನ್ನು ನೀಡುತ್ತದೆ. ಹಾಗಾಗಿ ಪರಿಸರ ರಕ್ಷಣೆ ನಮ್ಮ ಗುರಿ ಮತ್ತು ಧ್ಯೇಯವಾಗಬೇಕು ಎಂದರು.ಯೋಗವು ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ನಮ್ಮನ್ನು ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ. ಯೋಗವು ವ್ಯಾಯಮ ಮಾತ್ರವಲ್ಲದೇ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ಪ್ರತಿಯೊಬ್ಬರು ಪ್ರತಿದಿನ ಯೋಗಾಸನ ಮಾಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದ ಅವರು, ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗಾಸನವು ಹಲವಾರು ಆಸನಗಳನ್ನು ಒಳಗೊಂಡಿದ್ದು ಈ ಆಸನಗಳು ದೈಹಿಕವಾಗಿ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ ಎಂದು ತಿಳಿಸಿದರು.
ಮನುಷ್ಯನ ಪಂಚೇಂದ್ರಿಯಗಳಿಗೆ ಮತ್ತು ಯೋಗಕ್ಕೆ ಅವಿನಾಭಾವ ಸಂಬಂಧವಿದೆ ಯೋಗದಿಂದ ಉತ್ತಮ ಆರೋಗ್ಯ ಹೊಂದಬಹುದು. ಪ್ರಕೃತಿಯ ಮಾನವನಿಗೆ ಏನೆಲ್ಲಾ ಕೊಡುಗೆಗಳನ್ನು ನೀಡಿದೆ ಅದಕ್ಕೆ ಋಣಿಯಾಗಿ ಬದುಕಬೇಕು ಎಂದರು.ಪತ್ರಕರ್ತ ಜಿ.ಎಂ. ತೋಟಪ್ಪ ಮಾತನಾಡಿ, ಜನರಲ್ಲಿ ಆಧ್ಯಾತ್ಮದ ಸಂದೇಶವನ್ನು ತುಂಬುವ ನಿಟ್ಟಿನಲ್ಲಿ ಮಾಸಿಕ ಶಿವಾನುಭವ ದಂತಹ ಕಾರ್ಯಕ್ರಮಗಳು ಪೂರಕವಾಗಿರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಶಿವಪ್ಪ ಹಿತ್ಲರ್, ಮಠದ ಕಾರ್ಯದರ್ಶಿ ಶಿವಯೋಗಿ ದೂಪದಮಠ, ಅಕ್ಕನಬಳಗದ ರೇಣುಕಮ್ಮಗೌಳಿ, ಲತಾ ಮಹೇಶ್, ಶಾಂತಮ್ಮ, ಜಯಮಾಲ ಅಣ್ಣಾಜಿಗೌಡ, ಪುಷ್ಪಾ ಸೇರಿದಂತೆ ಮೊದಲಾದವರಿದ್ದರು.ಗಾಜನೂರಿನಲ್ಲಿ ಸಾವಿರ ಸಸಿ ನೆಡುವ ಅಭಿಯಾನ; ಪ್ರಕೃತಿ ಮರುಸ್ಥಾಪನೆ ಶಪಥಶಿವಮೊಗ್ಗ: ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳವಳಿಗೆ ಶನಿವಾರ ನಗರಕ್ಕೆ ಸಮೀಪದ ಗಾಜನೂರು ಅರಣ್ಯ ವ್ಯಾಪ್ತಿಯಲ್ಲಿ ಚಾಲನೆ ದೊರೆತಿದೆ. ಪ್ರಕೃತಿಯ ಉಳಿವು ನಮ್ಮ ನಿಲುವಾಗಲಿ ಎಂಬ ಘೋಷವಾಕ್ಯದ ಅಡಿಯಲ್ಲಿ ಈ ಕಾರ್ಯಕ್ರಮ ಜರುಗಿದೆ.
ಗಾಜನೂರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಮೂಲಕ ವಿಫೊಕ್ಸ್ ಸಂಸ್ಥೆ ಇತರೆ 11 ಸಂಸ್ಥೆಗಳ ಸಹಕಾರದೊಂದಿಗೆ ಪ್ರಕೃತಿಯ ಮರುಸ್ಥಾಪನೆಯ ಶಪಥ ಮಾಡಿದೆ.ಜವಾಬ್ದಾರಿ ಬೇಜವಾಬ್ದಾರಿಯಾದ ಹಿನ್ನೆಲೆಯಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಈಗಾಗಲೇ ಅನೇಕ ಸಂಘಸಂಸ್ಥೆಗಳು ಸಸಿಗಳನ್ನು ನೆಡುವ ಕೆಲಸ ನಡೆದಿದೆ. ಇನ್ನೂ ಹೆಚ್ಚು ಹೆಚ್ಚು ಸಸಿ ನೆಡುವ ಕಾರ್ಯಕ್ರಮಗಳು ನಡೆಯಬೇಕಿದೆ. ನಮ್ಮ ಅಭಿವೃದ್ಧಿ ಮಂತ್ರಗಳು ಮರಗಳಿಗೆ ಕೊಡಲಿ ಪೆಟ್ಟು ನೀಡಿದ ನಂತರವೇ ಆರಂಭವಾಗುವುದರಿಂದ ಈ ಬಗ್ಗೆಯೂ ಚಿಂತಿಸಬೇಕಿದೆ.ಗಾಜನೂರಿನಲ್ಲಿ ಹರಿಹರದ ವಿಫಾಕ್ಸ್ ವೆಂಚರ್ ಪ್ರೈವೇಟ್ ಲಿ., ಆಚಾರ್ಯ ತುಳಿಸಿ ಕಾಲೇಜು, ಶಿವಮೊಗ್ಗದ ಸಿರಿಲಿಜನ್-ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಗಾಜನೂರಿನ ಬೃಂದಾವನ ಹೈಡ್ರೋ ಪವರ್ ಪ್ರೈವೇಟ್ ಲಿ., ಸಿರಿಗಂಧ ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಶಿವಮೊಗ್ಗದ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್, ವೈಷ್ಟವ್ ಯೂನಿಫಾರಂ ಡಿಸ್ಟ್ರೀಬ್ಯೂಟರ್ಸ್, ಡಿಜಿ ಅಂಟ್ಸ್, ಶಂಕರ ವಲಯ ಅರಣ್ಯ ಇಲಾಖೆ, ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಗಾಜನೂರು ಗ್ರಾಮಪಂಚಾಯತ್ ವತಿಯಿಂದ 1 ಸಾವಿರ ಸಸಿ ನೆಡುವ ಕಾರ್ಯಕ್ರಮ ನಡೆದಿದೆ.
7 ಬಗೆಯ ಹಣ್ಣಿನ ಸಸಿಯನ್ನು ಈ ಅಭಿಯಾನದಲ್ಲಿ ನೆಡಲಾಗಿದೆ. ಕಾರಣ ಇಲ್ಲಿನ ವನ್ಯ ಜೀವಿಗಳಿಗೆ ಹಣ್ಣಿನ ಗಿಡಗಳು ಆಹಾರವಾಗಲಿ ಎಂಬ ಉದ್ದೇಶ ಹೊಂದಲಾಗಿದೆ.