ಸಂವಿಧಾನದ ಆಶಯದಂತೆ ಒಳ ಮೀಸಲಾತಿ ಜಾರಿಯಾಗಬೇಕು. ಅಲ್ಲಿಯವರೆಗೂ ಈ ಹಿಂದಿನಂತೆ ನಡೆದು ಬಂದಿರುವ ಮೀಸಲಾತಿ ರೋಸ್ಟರ್ ಪದ್ಧತಿಯನ್ನು ಅನುಸರಿಸಿ ಬಲಗೈ ಹಾಗೂ ಎಡಗೈ ಸಮುದಾಯಗಳಿಗೆ ಉದ್ಯೋಗದಲ್ಲಿ ಅವಕಾಶ ಮಾಡಿಕೊಡಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಮುದಾಯಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿ ಜಾರಿಯಾಗುವವರೆಗೆ ರೋಸ್ಟರ್ ಪದ್ಧತಿ ಮೂಲಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಛಲವಾದಿ ಮಹಾಸಭಾ ಸೇರಿದಂತೆ ಬಲಗೈ ಸಮುದಾಯದ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ನಂತರ ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಡಿ.ಪ್ರೇಮ್ ಕುಮಾರ್, ಎಡಗೈ ಸಮಾಜದ ಮುಖಂಡರಾದ ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ಅವರು ಬಲಗೈ ಸಮುದಾಯದ ಮಂತ್ರಿಗಳು ಹಾಗೂ ನಾಯಕರನ್ನು ನಿಂದಿಸಿ ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿರುವುದನ್ನು ಖಂಡಿಸಿದರು.
ಸಂವಿಧಾನದ ಆಶಯದಂತೆ ಒಳ ಮೀಸಲಾತಿ ಜಾರಿಯಾಗಬೇಕು. ಅಲ್ಲಿಯವರೆಗೂ ಈ ಹಿಂದಿನಂತೆ ನಡೆದು ಬಂದಿರುವ ಮೀಸಲಾತಿ ರೋಸ್ಟರ್ ಪದ್ಧತಿಯನ್ನು ಅನುಸರಿಸಿ ಬಲಗೈ ಹಾಗೂ ಎಡಗೈ ಸಮುದಾಯಗಳಿಗೆ ಉದ್ಯೋಗದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಎಡೈ ಮತ್ತು ಬಲಗೈ ಎಂದು ನಮ್ಮ ಜಾತಿ ಬೇರೆಯಾಗಿದ್ದರೂ ನಾವೆಲ್ಲರೂ ಶೋಷಿತರು, ತುಳಿತಕ್ಕೊಳದವರು. ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಒಂದು ಎಂದು ಪರಸ್ಪರ ಸಹೋದರರಂತೆ ಪ್ರೀತಿ ವಿಶ್ವಾಸ ಹಾಗೂ ಸ್ನೇಹ ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವ ನಮ್ಮನ್ನು ನಮ್ಮ ನಮ್ಮಲ್ಲಿಯೇ ಒಡೆದು ಆಳುವ ಮೂಲಕ ಎರಡು ಸಮುದಾಯಗಳ ಜನರ ನ್ಯಾಯಪರ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು.
ಈ ಬಗ್ಗೆ ಎರಡೂ ಸಮುದಾಯಗಳ ಜನರು ಜಾಗೃತವಾಗಿರಬೇಕು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಶಕ್ತಿಯಾಗಿದ್ದಾರೆ. ವಕೀಲರಾದ ಭಾಸ್ಕರ್ ಪ್ರಸಾದ್ ಹಾಗೂ ಅರುಣ್ ಕುಮಾರ್ ರವರು ಎಡಗೈ ಮತ್ತು ಬಲಗೈ ಸಮುದಾಯದ ನಡುವೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ನಮ್ಮಲ್ಲಿಯೇ ಎತ್ತಿ ಕಟ್ಟುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಲಗೈ ಸಮುದಾಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಸಿ.ಮಹದೇವಪ್ಪ, ಪ್ರಿಯಾಂಕ ಖರ್ಗೆ ಹಾಗೂ ನರೇಂದ್ರಸ್ವಾಮಿ ಅವರನ್ನು ನಿಂದಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ರಾಜಯ್ಯ, ಸೋಮಸುಂದರ್, ಸಂತೋಷ ಕುಮಾರ್, ಛಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಊಚನಹಳ್ಳಿ ನಟರಾಜು, ರಾಜ್ಯ ಛಲವಾದಿ ಮಹಾಸಭಾ ಸಂಚಾಲಕ ಮಾಂಬಳ್ಳಿ ಜಯರಾಮ್ ಹಲವರು ಭಾಗವಹಿಸಿದ್ದರು.