ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಬೂದನೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಸರ್ಕಾರ ೧೫ ಲಕ್ಷ ರು. ಹಣವನ್ನು ಮಾತ್ರ ಬೂದನೂರು ಉತ್ಸವಕ್ಕೆ ಬಿಡುಗಡೆ ಮಾಡಲಾಗಿತ್ತು. ಆದರೂ ಯಾರಿಂದಲೂ ಹಣ ಕೇಳದೆ ಸುಮಾರು ೧ ಕೋಟಿ ರು. ವೆಚ್ಚದಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು ಎಂದರು.
ಕೇರಳ ಬಿಟ್ಟರೆ ಬೂದನೂರಿನಲ್ಲಿ ಶ್ರೀಅನಂತಪದ್ಮನಾಭ ದೇವಾಲಯ:ಕೇರಳದಲ್ಲಿ ಬಿಟ್ಟರೆ ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯ ಇರುವುದು ಮಂಡ್ಯ ಜಿಲ್ಲೆಯ ಹೊಸಬೂದನೂರಿನಲ್ಲಿ ಮಾತ್ರ, ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಈ ದೇವಾಲಯವನ್ನು ಹೊರ ಜಗತ್ತಿಗೆ ಪರಿಚಯಿಸಬೇಕು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬೇಕೆನ್ನುವುದು ಉತ್ಸವದ ಉದ್ದೇಶ. ಬೂದನೂರು ಉತ್ಸವಕ್ಕೆ ಬರಲು ಸಾರ್ವಜನಿಕರಿಗೆ ವಾಹನಗಳ ಸೌಲಭ್ಯ ಹಾಗೂ ವಾಹನಗಳಿಗೆ ಅಚ್ಚುಕಟ್ಟಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ವಿವಿಧ ಕಲಾತಂಡಗಳೊಂದಿಗೆ ಹಳೇಬೂದನೂರಿನಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಸ್ಥಳೀಯರು ಸಹಕರಿಸಿದರೆ ೩೭ ಪೂಜಾ ಕುಣಿತ ತಂಡಗಳನ್ನು ಮೆರವಣಿಗೆಯಲ್ಲಿ ಆಯೋಜಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುವುದು. ಆಹಾರ ಮೇಳವನ್ನು ಸಹ ಸದರಿ ಉತ್ಸವದಲ್ಲಿ ನಡೆಸಲಾಗುವುದು ಎಂದರು.ರಂಗೋಲಿ ಸ್ಪರ್ಧೆ- ನಗದು ಬಹುಮಾನ:
ಕಸಬಾ ಹೋಬಳಿ ಪ್ರತಿ ಮನೆಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ವೈಯಕ್ತಿಕವಾಗಿ ನನ್ನ ಕಡೆಯಿಂದ ವಿಶೇಷ ಉಡುಗೊರೆ ನೀಡಲಾಗುವುದು. ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದವರಿಗೆ ಉಡುಗೊರೆ ನೀಡಲಾಗುವುದು ಎಂದರು.ಮೂರು ದಿನ ಹೆಲಿ ಟೂರಿಸಂ:
ಸ್ಥಳೀಯ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಬಾರಿಯ ಬುದನೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ. ಪ್ರವಾಸಿಗರನ್ನು ಹಾಗೂ ಸ್ಥಳೀಯರಿಗಾಗಿ ಈ ವರ್ಷದ ಉತ್ಸವದಲ್ಲಿ ಫೆ.೨೦ರಿಂದ ೩ ದಿನಗಳ ಕಾಲ ‘ಹೆಲಿ ಟೂರಿಸಂ’ ಆಯೋಜನೆ ಮಾಡಲಾಗುವುದು. ಸ್ಥಳೀಯರು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಬೆಲೆ ನಿಗದಿಪಡಿಸಲಾಗುವುದು. ಹೆಲಿಕಾಪ್ಟರ್‌ನಲ್ಲಿ ಸುತ್ತಾಟ ನಡೆಸುವ ಮೂಲಕ ಸಾರ್ವಜನಿಕರು ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಬಹುದು ಎಂದು ಶಾಸಕ ಪಿ.ರವಿಕುಮಾರ್ ವಿವರಿಸಿದರು.ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮ:
ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಗುರುಕಿರಣ್ ಮತ್ತು ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ೨೦೨೪ರಲ್ಲಿ ಬೂದನೂರು ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಗಿತ್ತು. ಬೂದನೂರಿನ ಶ್ರೀಕಾಶಿ ವಿಶ್ವನಾಥ ಮತ್ತು ಶ್ರೀಅನಂತಪದ್ಮನಾಭಸ್ವಾಮಿ ದೇವಾಲಯದ ವಾಸ್ತುಶಿಲ್ಪ ಬೇಲೂರು-ಹಳೇಬೀಡಿನಷ್ಟೇ ಸುಂದರವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದೇವಾಲಯಗಳಾಗಿ ಹೊರಹೊಮ್ಮಿವೆ. ದೇವಾಲಯದ ಕಲೆ ವಾಸ್ತುಶಿಲ್ಪವನ್ನು ಉಳಿಸಬೇಕು ಎಂಬ ಸದುದ್ದೇಶದಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಬೂದನೂರು ಉತ್ಸವವನ್ನು ಆಚರಿಸಲು ಮುಂದಾಗಿದ್ದಾರೆ ಎಂದರು.
ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ:ಬೂದನೂರು ಉತ್ಸವದ ಪೂರ್ವ ತಯಾರಿಗಾಗಿ ಈಗಾಗಲೇ ಸ್ವಾಗತ ಸಮಿತಿ, ವೇದಿಕೆ ಸಮಿತಿ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ. ಬೂದನೂರು ಉತ್ಸವದಲ್ಲಿ ಸ್ಥಳೀಯರಿಗೆ ದೇಶಿ ಕ್ರೀಡೆಗಳನ್ನು ಆಯೋಜಿಸಲಾಗುವುದು. ವಸ್ತುಪ್ರದರ್ಶನ ಮಳಿಗೆ ತೆರೆಯಲಾಗುವುದು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಹಿಳೆಯರು ಮತ್ತು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಲು ರಂಗೋಲಿ, ಚಿತ್ರಕಲೆ, ಹಗ್ಗಜಗ್ಗಾಟ. ಕಬಡ್ಡಿ ಸೇರಿದಂತೆ ಇನ್ನಿತರೆ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದರು.
ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಬೂದನೂರು ಉತ್ಸವವನ್ನು ತಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಮನಸ್ತಾಪ ಬಿಟ್ಟು ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ. ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಅಪರ ಪೊಲೀಸ್ ಅಧೀಕ್ಷಕ ಸಿ.ಇ.ತಿಮ್ಮಯ್ಯ, ತಹಸೀಲ್ದಾರ್ ವಿಶ್ವನಾಥ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಚ್.ಎನ್. ಯೋಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.ಹೆಲಿ ಟೂರಿಸಂಗೆ ಸ್ಥಳ ಪರಿಶೀಲನೆ
ಫೆ.20 ರಿಂದ ನಡೆಯಲಿರುವ ಬೂದನೂರು ಉತ್ಸವದ ವೇಳೆ ಪ್ರವಾಸಿಗರನ್ನು ಆಕರ್ಷಿಸಲು ಹೆಲಿ ಟೂರಿಸಂ ಆಯೋಜನೆ ಮಾಡಲಾಗಿದೆ. ಫೆ.೨೦ ರಿಂದ ಮೂರು ದಿನಗಳ ಕಾಲ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಹೆಲಿ ಟೂರಿಸಂಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಹೆಲಿಕಾಪ್ಟರ್ ಮೂಲಕ ಬೂದನೂರು ಉತ್ಸವವನ್ನು ಕಣ್ತುಂಬಿಕೊಳ್ಳಬಹುದು. ಆ ನಿಟ್ಟಿನಲ್ಲಿ ಹೆಲಿಪ್ಯಾಡ್ ನಿರ್ಮಾಣ ಸ್ಥಳವನ್ನು ಶುಕ್ರವಾರ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಪರಿಶೀಲನೆ ನಡೆಸಿದರು. ಈ ವೇಳೆ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಅಪರ ಪೊಲೀಸ್ ಅಧೀಕ್ಷಕ ಈ.ಸಿ.ತಿಮ್ಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.