9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು

KannadaprabhaNewsNetwork |  
Published : Aug 19, 2026, 01:45 AM IST
18ಕೆಎಂಎನ್ ಡಿ15 | Kannada Prabha

ಸಾರಾಂಶ

ಕಳೆದ 9 ತಿಂಗಳಿಂದ ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ಮಹಿಳೆಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಹೆಬ್ಬೆರಳು ಗಾತ್ರದ ಅಡಿಕೆಯನ್ನು ಹೊರತೆಗೆದು ಕ್ಷಯ ಎಂದು ಶಂಕಿಸಲಾಗಿದ್ದ ರೋಗಿಯನ್ನು ಗುಣಪಡಿಸುವಲ್ಲಿ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶ್ವಾಸಕೋಶ ವೈದ್ಯಕೀಯ ವಿಭಾಗದ ವೈದ್ಯರು ಯಶಸ್ವಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಳೆದ 9 ತಿಂಗಳಿಂದ ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ಮಹಿಳೆಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಹೆಬ್ಬೆರಳು ಗಾತ್ರದ ಅಡಿಕೆಯನ್ನು ಹೊರತೆಗೆದು ಕ್ಷಯ ಎಂದು ಶಂಕಿಸಲಾಗಿದ್ದ ರೋಗಿಯನ್ನು ಗುಣಪಡಿಸುವಲ್ಲಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶ್ವಾಸಕೋಶ ವೈದ್ಯಕೀಯ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ.

ದಾವಣಗೆರೆಯ ಸಂತೋಷ್‌ಗಿರಿ ಗೋಸಾವಿ ಪತ್ನಿ ವೇದಿಕಾ ಅವರೇ ಬ್ರೋಂಕೋಸ್ಕೋಪಿ ಮೂಲಕ ಶ್ವಾಸನಾಳ ಮಾರ್ಗದಲ್ಲಿ ಸಿಲುಕಿದ್ದ ಅಡಿಕೆಯನ್ನು ಹೊರತೆಗೆಸಿಕೊಂಡು ಗುಣಮುಖರಾಗಿ ನಿರಂತರ ಕೆಮ್ಮಿನ ಸಮಸ್ಯೆಗೆ ಮುಕ್ತಿಪಡೆದಿರುವ ಗೃಹಿಣಿ.

ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ವೇದಿಕಾ ಅವರಿಗೆ ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದ್ದರೂ ಸಮಸ್ಯೆಗೆ ನಿಖರವಾದ ಕಾರಣ ಪತ್ತೆಯಾಗಿರಲಿಲ್ಲ. ಕ್ಷಯರೋಗಕ್ಕೆ ಯಾವುದೇ ಖಚಿತ ಸಾಕ್ಷ್ಯಗಳಿಲ್ಲದಿದ್ದರೂ, ದೀರ್ಘಕಾಲದ ಕೆಮ್ಮಿನ ಕಾರಣದಿಂದಾಗಿ ಅವರನ್ನು ಹಲವು ಬಾರಿ ಕ್ಷಯ ಶಂಕಿತ ರೋಗಿ ಎಂದು ಗುರುತಿಸಲಾಗಿತ್ತು.

ತಿಪಟೂರಿನ ವೈದ್ಯರೊಬ್ಬರ ಸಲಹೆ ಮೇರೆಗೆ ಇತ್ತೀಚೆಗೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಬಂದು ದಾಖಲಾದ ವೇದಿಕಾ ಅವರಿಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶ್ವಾಸಕೋಶ ವೈದ್ಯಕೀಯ ವಿಭಾಗದಲ್ಲಿ ಪರೀಕ್ಷಿಸಿದ ವೈದ್ಯರು ರೋಗಿಯ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿದರು. ಈ ವೇಳೆ ಕೆಲ ತಿಂಗಳ ಹಿಂದೆ ಶ್ವಾಸನಾಳಕ್ಕೆ ಅಡಿಕೆ ಹೋಗಿರಬಹುದಾದ ಕುರಿತು ಮಹತ್ವದ ಮಾಹಿತಿ ದೊರೆಯಿತು.

ಈ ಸುಳಿವಿನ ಆಧಾರದ ಮೇಲೆ ಫ್ಲೆಕ್ಸಿಬಲ್ ಬ್ರೋಂಕೋಸ್ಕೋಪಿ (ಶ್ವಾಶನಾಳದರ್ಶಿ) ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ವೇಳೆ ಶ್ವಾಸನಾಳ ಮಾರ್ಗದಲ್ಲಿ 2.5x1.5 ಸೆಂ.ಮೀ. ಗಾತ್ರದ ದೊಡ್ಡವರ ಹೆಬ್ಬೆರಳು ಗಾತ್ರದ ಅಡಿಕೆ ಸಿಲುಕಿಕೊಂಡಿರುವ ಅಚ್ಚರಿಯ ಸಂಗತಿಯನ್ನು ವೈದ್ಯರು ಪತ್ತೆ ಹಚ್ಚಿದರು. ಸುಮಾರು 9 ತಿಂಗಳಿಂದ ರೋಗಿಯನ್ನು ಕಾಡುತ್ತಿದ್ದ ಸಮಸ್ಯೆಗೆ ಇದೇ ಮೂಲ ಕಾರಣವಾಗಿತ್ತು.

ಶ್ವಾಸಕೋಶ ವೈದ್ಯಕೀಯ ವಿಭಾಗದ ತಜ್ಞರ ತಂಡ ಅತ್ಯಂತ ಜಾಗರೂಕತೆಯಿಂದ ಮತ್ತು ನಿಖರತೆಯಿಂದ ಜನರಲ್ ಅನಸ್ತೇಶಿಯ ನೀಡಿ ಬ್ರೋಂಕೋಸ್ಕೋಪಿ ಮೂಲಕ ಆ ಅಡಿಕೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಶ್ವಾಸನಾಳ ಮಾರ್ಗಗಳಿಗೆ ಯಾವುದೇ ಹಾನಿಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಚಿಕಿತ್ಸೆ ಬಳಿಕ ಸುಮಾರು ಒಂದು ವರ್ಷದಿಂದ ರೋಗಿಯನ್ನು ಕಾಡುತ್ತಿದ್ದ ಕೆಮ್ಮು ಹಾಗೂ ಇತರ ಲಕ್ಷಣಗಳು ಬಹುತೇಕ ಸಂಪೂರ್ಣ ಕಡಿಮೆಯಾಗಿವೆ.

ಈ ಅಪರೂಪದ ಪ್ರಕರಣವು ಸರಿಯಾದ ವೈದ್ಯಕೀಯ ಇತಿಹಾಸ ಸಂಗ್ರಹಣೆ, ವೈದ್ಯರ ಅನುಭವ ಹಾಗೂ ಸಮಗ್ರ ರೋಗ ನಿರ್ಣಯದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಜೊತೆಗೆ ದೀರ್ಘಕಾಲದ ಉಸಿರಾಟದ ಸಮಸ್ಯೆಗಳ ನಿಜವಾದ ಕಾರಣವನ್ನು ಪತ್ತೆಹಚ್ಚುವಲ್ಲಿ ಬ್ರೋಂಕೋಸ್ಕೋಪಿ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇಂತಹ ಸುಧಾರಿತ ಬ್ರೋಂಕೋಸ್ಕೋಪಿ ಮತ್ತು ಇಂಟರ್ ವೆನ್ಷನಲ್ ಪಲ್ಮನಾಲಜಿ ಚಿಕಿತ್ಸೆಗಳು ಸಾಮಾನ್ಯವಾಗಿ ದೊಡ್ಡ ನಗರ ಪ್ರದೇಶದ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು ಸುರಕ್ಷಿತವಾಗಿ, ಪರಿಣಾಮಕಾರಿಯಾಗಿ ಹಾಗೂ ಕೈಗೆಟುಕುವ ದರದಲ್ಲಿ ಸಿಗಬೇಕೆಂಬ ಭೈರವೈಕ್ಯ ಡಾ.ಬಾಲಗಂಗಾಧನಾಥಶ್ರೀಗಳ ಆಶಯದಂತೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ರೋಗಿಗಳಿಗೆ ವಿಶ್ವ ಮಟ್ಟದ ಚಿಕಿತ್ಸೆ ಗ್ರಾಮೀಣ ಪ್ರದೇಶದಲ್ಲಿಯೇ ದೊರೆಯುತ್ತದೆ ಎಂಬುದನ್ನು ಆದಿಚುಂಚನಗಿರಿ ಆಸ್ಪತ್ರೆ ಸಾಬೀತು ಪಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖರ್ಗೆ ಭಾಷಣ ಮಾಡಿದ ಸ್ಥಳ ಸ್ವಚ್ಛ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ
ನದಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ