ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಭಾಗದ ರೈತರು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಟಿ.ಬಿ.ಡ್ಯಾಂನ ತುಂಗಭದ್ರಾ ಮಂಡಳಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹೊಸಪೇಟೆ: ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಭಾಗದ ರೈತರು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಟಿ.ಬಿ.ಡ್ಯಾಂನ ತುಂಗಭದ್ರಾ ಮಂಡಳಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿ ಮಾನಾಡಿದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಬಚಾವತ್ ಅಯೋಗದ ವರದಿ ಆಧರಿಸಿ, ಜಲಾಶಯದ ನೀರಿನ ಹಂಚಿಕೆ ಮಾಡಲಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ 17 ಲಕ್ಷ ಹೆಕ್ಟೇರ್ ಹಾಗೂ ರಾಜ್ಯದ ವ್ಯಾಪ್ತಿಯಲ್ಲಿ 9 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಇದೆ. ಈ ವರ್ಷ ನದಿಗೆ 8ರಿಂದ 9 ಟಿಎಂಸಿ ನೀರು ಹರಿಸಬೇಕಾಗಿದೆ. ನದಿಗಳು ಭತ್ತದಂತೆ ನೀರು ಹರಿಸಬೇಕು ಎಂಬ ಆದೇಶ ಬಚಾವತ್ ಆಯೋಗದ ವರದಿಯಲ್ಲಿದೆ. ಪ್ರತಿ ದಿನ ನೂರು ಕ್ಯೂಸೆಕ್ ನೀರು ಹರಿಸಬೇಕು. ಈ ಕುರಿತು ಅಧಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಅಯೋಗದ ವರದಿ ಆಧರಿಸಿ ನೀರು ಪಡೆಯಬೇಕಾಗಿದೆ. ಹಾಗಾಗಿ, ರೈತರು ಆಕ್ರೋಶಕ್ಕೆ ಒಳಗಾಗುವುದು ಬೇಡ ಎಂದರು.ನಮ್ಮ ಹಕ್ಕು ಪಡೆಯಲು ಹೋರಾಟ ಮಾಡೋಣ, ನಮ್ಮ ಬೇಡಿಕೆಗೆ ಮಂಡಳಿ ಒಪ್ಪದಿದ್ದರೆ, ನ್ಯಾಯಾಲಯದ ಮೊರೆ ಹೋಗೋಣ, ಬ್ರಿಜೇಶ್ ಪಟೇಲ್ ಆಯೋಗದ ಜಾರಿಗೆ ಒತ್ತಡ ತರೋಣ. ಕುಡಿಯಲು, ಕೃಷಿ ಚಟುವಟಿಕೆಗೆ ನೀರಿನ ಅವಶ್ಯಕತೆಯಿದ್ದು, ಸದ್ಯ ಕಾಲುವೆ ಮೂಲಕ ನೀರು ಹರಿಸುತ್ತಿದ್ದರೂ ಈ ಭಾಗದ ರೈತರಿಗೆ ಯಾವುದೇ ಅನುಕೂಲ ಆಗುತ್ತಿಲ್ಲ. ಕಾಲುವೆ ನೀರು ನೇರವಾಗಿ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ನದಿಗೆ 8.5 ಟಿಎಂಸಿ ನೀರು ಬಿಡಬೇಕು ಎಂದು ಒತ್ತಾಯಿಸಿದರು.
ನದಿಗೆ ನೀರು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ನದಿ ವ್ಯಾಪ್ತಿಯ ರೈತರು, ಜಲಚರಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ತಕ್ಷಣ ನದಿಗೆ ನೀರು ಬಿಡಬೇಕು ಎಂದು ಆಗ್ರಹಿಸಿದ ರೈತರು ನದಿಗೆ ನೀರು ಬಿಡುವ ವರೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಬತ್ತಿದ ನದಿಗೆ ನೀರು ಬಿಡಲೇ ಬೇಕು. ನೀರು ಬಿಡುವ ವರೆಗೆ ನಮ್ಮ ಹೋರಾಟ ನಿರಂತರವಾಗಿರಲಿದೆ. ನಾವು ನೀರಿಗಾಗಿ ಉಪವಾಸ ಮಾಡಲು ಸಿದ್ಧ. ತಮಗೆ ಬೇಕಾದಾಗ ನೀರು ಬಿಡುತ್ತಾರೆ. ರೈತರಿಗೆ ಅವಶ್ಯಕತೆ ಇರುವಾಗ ನೀರು ಬಿಡುತ್ತಿಲ್ಲ ಎಂದು ತುಂಗಭದ್ರಾ ಮಂಡಳಿ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿದಿನ ನದಿ ಮೂಲಕ 200 ಕ್ಯೂಸೆಕ್ ನಂತೆ ನೂರು ದಿನ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಬಸವರಾಜ ದಡೇಸೂಗುರು, ಎಂ.ಎಸ್. ಸೋಮಲಿಂಗಪ್ಪ, ಮುಖಂಡರಾದ ಅಶೋಕ್ ಭೂಪಾಲ್, ಉಪ್ಪಳ ಚನ್ನಬಸವನಗೌಡ, ಗೋಪಾಲರೆಡ್ಡಿ ಮುಕುಂದ, ಬೇವೂರು ಚನ್ನಬಸವನಗೌಡ, ಪ್ರಸಾದ ರಾವ್, ಲಿಂಗಣ್ಣ ಸಾಹುಕಾರ್, ಖಾಸೀಂಸಾಬ್ ದಡೇಸೂಗುರು, ಮಧುಸೂಧನ್ ರಾವ್ ಮುಕುಂದ, ಸತ್ಯನಾರಾಯಣ ಸಿರುಗುಪ್ಪ ಸೇರಿದಂತೆ ರಾಯಚೂರು, ಸಿಂಧನೂರು, ಕೊಪ್ಪಳ, ಕಾರಟಗಿ, ಮಾನ್ವಿ, ಬಳ್ಳಾರಿ, ಸಿರುಗುಪ್ಪ ಭಾಗದ ನೂರಾರು ರೈತರು ಭಾಗವಹಿಸಿದ್ದರು.ಭಾರಿ ಭದ್ರತೆ
ತುಂಗಭದ್ರಾ ಮಂಡಳಿ ಕಚೇರಿ ಎದುರು ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಡಳಿ ಕಚೇರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್ಪಿ ಪಿ. ಮುರಳೀಧರ್, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಹರಪನಹಳ್ಳಿ ಡಿವೈಎಸ್ಪಿ ಡಾ. ಸಂತೋಷ್ ಚವ್ಜಾಣ್ ನೇತೃತ್ವದಲ್ಲಿ ಕೆ.ಎಸ್.ಆರ್.ಪಿ., ಡಿಆರ್ ತುಕಡಿಗಳು ಸೇರಿದಂತೆ 500ಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.ಶಾಸಕರು-ರೈತರ ನಡುವೆ ಮಾತಿನ ಚಕಮಕಿ
ಟಿ.ಬಿ. ಡ್ಯಾಂನ ತುಂಗಭದ್ರಾ ಮಂಡಳಿ ಕಚೇರಿ ಎದುರು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಜಲಾಶಯದಿಂದ ನದಿಗೆ ನೀರು ಹರಿಸುವ ವಿಷಯ ಕುರಿತಂತೆ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಬರುವುದಾಗಿ ತಿಳಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ತುಂಗಭದ್ರಾ ಮಂಡಳಿ ಕಚೇರಿಗೆ ಹೋಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದು ಬೇಡ. ಅಧಿಕಾರಿಗಳೆ ಸ್ಥಳಕ್ಕೆ ಬರಲಿ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ರೈತರ ನಡುವೆ ಮಾತಿನ ಚಕಮಕಿ ಜರುಗಿತು. ರೈತರ ವಿರೋಧದ ನಡುವೆ ಶಾಸಕ ಬಾದರ್ಲಿ ಮಂಡಳಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮುಂದಾದರು.