-ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ, ಹಿರಿಯ ರಾಜಕೀಯ ಮುತ್ಸದ್ದಿಗಳೂ ಆಗಿದ್ದ ಎಸ್.ಎಂ.ಕೃಷ್ಣ ಅವರು ಸಂಭಾವಿತ ರಾಜಕಾರಣಿ ಎಂದು ಖ್ಯಾತರಾದವರು. ಸುಮಾರು ಆರು ದಶಕಗಳ ಸುದೀರ್ಘ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕ, ದಕ್ಷ ಆಡಳಿತಗಾರರೆನಿಸಿಕೊಂಡು ತಮ್ಮ ಸಾರ್ಥಕ ಸೇವೆಯಿಂದ ಜನಮನದಲ್ಲಿ ಶಾಶ್ವತ ಸ್ಥಾನ ಗಳಿಸಿದವರು. ಜನಪ್ರತಿನಿಧಿಯಾದವರು ತಮ್ಮ ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದವರು. ಕೋಮು ರಾಜಕೀಯ ಹಾಗೂ ಜಾತಿ ರಾಜಕೀಯದಿಂದ ಸದಾ ದೂರವಿದ್ದವರು.ಸಾಮಾನ್ಯವಾಗಿ ಹಿರಿಯ ರಾಜಕಾರಣಿಗಳ ಮೇಲೆ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣ್ ಅವರ ಪ್ರಭಾವ ಹೆಚ್ಚಿರುತ್ತದೆ ಎಂಬುದು ಸರ್ವವಿಧಿತ. ಆದರೆ ಕೃಷ್ಣ ಅವರ ಮೇಲೆ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರ ಪ್ರಭಾವದ ಜೊತೆಗೆ ಮಾರ್ಟಿನ್ ಲೂಥರ್‌ಕಿಂಗ್, ರೂಸೋ ಮುಂತಾದವರು ಬೀರಿರುವ ಪ್ರಭಾವವೂ ಕಡಿಮೆಯೇನಲ್ಲ. ರಾಜಕಾರಣಿಗಳೆಂದರೆ ಅವರಿಗೆ ರಾಜಕೀಯವೇ ವೃತ್ತಿ ಎನ್ನುವವರಿದ್ದಾರೆ. ಆದರೆ ಕೃಷ್ಣ ಅವರು ಅಧ್ಯಯನಶೀಲ ರಾಜಕಾರಣಿ. ಸಾಹಿತ್ಯೋಪಾಸಕರೂ ಹೌದು. ತಾವು ಪಡೆದ ಶಿಕ್ಷಣ, ಸಂಗೀತ, ಕ್ರೀಡೆ, ಸಾಹಿತ್ಯ ಮುಂತಾದ ಸಂಸ್ಕಾರಯುತ ಅಭಿರುಚಿಗಳಿಂದಾಗಿ ಅವರು ಉತ್ತಮ ಸಂಸದೀಯಪಟು ಎಂದು ಖ್ಯಾತರಾಗಿದ್ದರು.
ಸುಶಿಕ್ಷಿತ, ಸಜ್ಜನ, ಪ್ರತಿಭಾವಂತಕೃಷ್ಣರವರು ಸುಶಿಕ್ಷಿತರು, ಸಜ್ಜನರು. ಕರ್ನಾಟಕ ಕಂಡ ಮುಖ್ಯಮಂತ್ರಿಗಳಲ್ಲಿ ಅತ್ಯಂತ ಹೆಚ್ಚು ಶಿಕ್ಷಣ ಪಡೆದವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದ ಇವರು ಮುಂದೆ, ಅಮೆರಿಕದ ಟೆಕ್ಸಾಸ್ ರಾಜ್ಯದ ಸದರನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಬಗ್ಗೆ ಉನ್ನತ ಶಿಕ್ಷಣ ಪಡೆದು ಎಂ.ಸಿ.ಐ.ಎಲ್. (ಮಾಸ್ಟರ್ ಆಫ್ ಕಂಪೇರಿಟಿವ್ ಆ್ಯಂಡ್ ಇಂಟರ್‌ನ್ಯಾಷನಲ್ ಲಾ) ಸ್ನಾತಕೋತ್ತರ ಪದವಿ ಗಳಿಸಿದರು. ವಾಷಿಂಗ್ಟನ್‌ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಪ್ರತಿಷ್ಠಿತ ಫುಲ್ ಬ್ರೈಟ್ ವಿದ್ಯಾರ್ಥಿ ವೇತನ ಪಡೆದುಕೊಂಡ ಪ್ರತಿಭಾವಂತರು. ಡಲ್ಲಾಸ್, ಯುಎಸ್‌ಎ ಮತ್ತು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಉನ್ನತ ಅಧ್ಯಯನ ಮಾಡಿದವರು. ತಮ್ಮ ವಿದ್ಯಾಭ್ಯಾಸ ಪೂರೈಸಿ ಭಾರತಕ್ಕೆ ಹಿಂತಿರುಗಿದ ನಂತರ ಅವರು ಮೊದಲಿಗೆ ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ, ರಾಜಕೀಯ ಪ್ರಜ್ಞಾವಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಮಲ್ಲಯ್ಯನವರ ಪುತ್ರರಾಗಿ ಜನಿಸಿದ ಕೃಷ್ಣರಿಗೆ ರಾಜಕೀಯವೆಂಬುದು ರಕ್ತಗತವಾಗಿಯೇ ಬಂದಿತ್ತು. ಅವರು ಅಮೆರಿಕದಲ್ಲಿದ್ದಾಗ ಅಲ್ಲಿ ಜಾನ್ ಎಫ್.ಕೆನಡಿಯವರು ಅಧ್ಯಕ್ಷೀಯ ಚುನಾವಣೆ ಎದುರಿಸುತ್ತಿದ್ದರು. ಕೆನಡಿಯ ಮೋಹಕ ವ್ಯಕ್ತಿತ್ವಕ್ಕೆ ಮಾರುಹೋಗಿದ್ದ ಕೃಷ್ಣ ಅವರು ನ್ಯಾಷನಲ್ ಅಸೋಸಿಯೇಷನ್ ಆಫ್ ಮ್ಯಾನ್ಯುಫ್ಯಾಕ್ಚರರ್ಸ್ ವತಿಯಿಂದ ಕೆನಡಿ ಪರ ಪ್ರಚಾರ ಕೈಗೊಂಡಿದ್ದು, ಕೆನಡಿಯವರು ಜಯಗಳಿಸಿ ಅಧ್ಯಕ್ಷರಾದ ನಂತರ ಸ್ವತಃ ಕೃಷ್ಣ ಅವರನ್ನು ಹೊಗಳಿ ಮೆಚ್ಚುಗೆ ಸೂಚಿಸಿದ್ದು ಇಲ್ಲಿ ಸ್ಮರಣೀಯ.ಪಾಶ್ಚಾತ್ಯ, ಪೌರತ್ಯ ಸಂಸ್ಕೃತಿಗಳ ಸಂಗಮ
ಕೃಷ್ಣ ಅವರ ವ್ಯಕ್ತಿತ್ವ ಪಾಶ್ಚಾತ್ಯ ಹಾಗೂ ಪೌರಾತ್ಯ ಸಂಸ್ಕೃತಿಗಳ ಅಪೂರ್ವ ಸಂಗಮ. ಭಾರತೀಯ ಸಂಸ್ಕೃತಿ ಹಾಗೂ ಅಮೆರಿಕ ಸಂಸ್ಕೃತಿಗಳ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಕೃಷ್ಣ ಅವರದು ನಡೆ, ನುಡಿ, ವೇಷ, ಭೂಷಣ ಎಲ್ಲದರಲ್ಲೂ ಶಿಸ್ತು ಹಾಗೂ ಅಚ್ಚುಕಟ್ಟು. ಕೃಷ್ಣರವರ ಭಾಷಾ ಪ್ರೌಢಿಮೆಗೆ ಅವರೇ ಸಾಟಿ. ವಿಧಾನಸಭೆಯಲ್ಲಿ ಎದ್ದು ನಿಂತರೆ ಯಾವ ಹೊಸ ವಿಷಯದ ಪ್ರತಿಪಾದನೆ ಮಾಡುತ್ತಾರೆಂದು ಎಲ್ಲರಿಗೂ ಆಸಕ್ತಿ ಹುಟ್ಟುವಂತೆ ಮಾಡುವ ಶಕ್ತಿ ಕೃಷ್ಣ ಅವರಲ್ಲಿತ್ತು.ಕರ್ನಾಟಕ ವಿಧಾನಸಭೆ, ವಿಧಾನ ಪರಿಷತ್ತು, ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರಾಗಿ, ರಾಜ್ಯ ಮತ್ತು ಕೇಂದ್ರದ ಸಚಿವರಾಗಿ, ವಿಧಾನ ಸಭೆ ಅಧ್ಯಕ್ಷರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಇವರು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಲ್ಲಿಸಿರುವ ಪ್ರಾಮಾಣಿಕ ಸೇವೆ ಎಂದಿಗೂ ಅವಿಸ್ಮರಣಿಯ. ಪ್ರಗತಿಪರ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಕೃಷ್ಣರವರು ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿ ಐಟಿ-ಬಿಟಿಗೆ ಭದ್ರ ಬುನಾದಿ ಹಾಕಿದರು. ಬೆಂಗಳೂರಿನಲ್ಲಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಿದರು. ಬೆಂಗಳೂರಿಗೆ ವಿಶ್ವ ಮನ್ನಣೆ ದೊರಕುವಂತೆ ಮಾಡಿದರು. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಿಲಿಕಾನ್‌ವ್ಯಾಲಿ ಎಂದು ಖ್ಯಾತಿ ಗಳಿಸಲು ಕಾರಣಕರ್ತರಾದರು. ರಾಷ್ಟ್ರದ ಅಭಿವೃದ್ಧಿಗೆ ನೀಡಿರುವ ಇವರ ಗಣನೀಯ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಬ್ಯಾಕ್‌ಲಾಗ್ ಹುದ್ದೆ ಭರ್ತಿಗೂ ಕ್ರಮಜನರಿಗೆ ಶೀಘ್ರ ಅಗತ್ಯ ಮಾಹಿತಿ ದೊರೆಯುವಂತಾಗಲು ಆಡಳಿತದಲ್ಲಿ ಕಂಪ್ಯೂಟರೀಕರಣ ಪ್ರಕ್ರಿಯೆ ಆರಂಭಿಸಿದರು. ಜೈವಿಕ ತಂತ್ರಜ್ಞಾನದ ಮಹತ್ವ ಅರಿತಿದ್ದು ಅದರ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದರು. ಬೆಂಗಳೂರು ನಗರ ಅಭಿವೃದ್ಧಿಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಅನಿವಾರ್ಯತೆ ತಿಳಿಸಿ ಅದಕ್ಕಾಗಿ ನಾಗರಿಕರನ್ನೊಳಗೊಂಡ ಟಾಸ್ಕ್‌ಫೋರ್ಸ್ ರಚಿಸಿದ್ದರು. ಅಂತಿಮವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಆರಂಭಿಸುವಲ್ಲಿ ಯಶಸ್ವಿಯಾಗಿದ್ದರು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ/ಪಂಗಡಗಳಿಗಾಗಿ ಮೀಸಲಾಗಿದ್ದ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದರು. ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಗಾಗಿ ಒಂದು ಕಾರ್ಯಪಡೆ ರಚಿಸಿ, ಅದರ ಶಿಫಾರಸಿನಂತೆ ಈ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಮತ್ತು ಸಂಪನ್ಮೂಲ ಕ್ರೋಢೀಕರಿಸಿ 1993ರಲ್ಲಿ ಪಂಚಾಯಿತಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿದರು.
5 ಕೋಟಿ ಸಸಿ ನೆಡಲು ಕೃಷ್ಣ ಸಹಕಾರಆಡಳಿತಾವಧಿಯಲ್ಲಿ ತಲೆದೋರಿದ ನಿರಂತರ ಬರ ಪರಿಸ್ಥಿತಿ, ಉತ್ತರ ಕರ್ನಾಟಕದ ರೈತರ ಆತ್ಮಹತ್ಯಾ ಪ್ರಕರಣಗಳು, ನೀರಾ ಚಳವಳಿ, ಕಾಡುಗಳ್ಳ ವೀರಪ್ಪನ್‌ನಿಂದ ಚಿತ್ರನಟ ರಾಜ್‌ಕುಮಾರ್ ಅವರ ಅಪಹರಣ ಹಾಗೂ ಮಾಜಿ ಸಚಿವ ನಾಗಪ್ಪನವರ ಅಪಹರಣ ಮತ್ತು ಹತ್ಯೆ, ಕಾವೇರಿ ವಿವಾದದ ಉಲ್ಬಣ, ಆಲಮಟ್ಟಿ ಅಣೆಕಟ್ಟಿನ ವಿವಾದ ಮುಂತಾದವು ಸಾಕಷ್ಟು ಸಂಕಷ್ಟ ಪರಿಸ್ಥಿತಿ ತಂದೊಡ್ಡಿದ್ದವು. ಆದರೂ ಧೃತಿಗೆಡದ ಕೃಷ್ಣರವರು ಎಲ್ಲವನ್ನೂ ಸಮಚಿತ್ತದಿಂದ ಎದುರಿಸಿ ಸಮತೋಲನ ಕಳೆದುಕೊಳ್ಳದೆ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದರು. ನಮ್ಮ ಪರಮಪೂಜ್ಯ ಗುರುಗಳಾದ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಸೇವಾಕೈಂಕರ್ಯಕ್ಕೆ ಮಾರು ಹೋಗಿದ್ದ ಕೃಷ್ಣರವರು ಆದಿಚುಂಚನಗಿರಿ ಕ್ಷೇತ್ರದ ಗುರು ದೇವತೆಗಳಲ್ಲಿ ಅಪಾರ ಶ್ರದ್ಧಾಭಕ್ತಿ ಹೊಂದಿದ್ದರು. ಪೂಜ್ಯ ಗುರೂಜಿಯವರು ಪರಿಸರ ಸಂರಕ್ಷಿಸಲು ಕರ್ನಾಟಕ ವನ ಸಂವರ್ಧನ ಟ್ರಸ್ಟ್ ರಚಿಸಿ ಐದು ಕೋಟಿ ಸಸಿ ನೆಟ್ಟು ಬೆಳೆಸಲು ಸಂಕಲ್ಪಿಸಿದರು. ಇದು ಸಾಕಾರಗೊಳ್ಳುವಲ್ಲಿ ಅಂದು ಮುಖ್ಯಮಂತ್ರಿಗಳಾಗಿದ್ದ ಕೃಷ್ಣರವರು ನೀಡಿದ ಸಹಕಾರ ಎಂದಿಗೂ ಸ್ಮರಣೀಯ. ಶ್ರೀ ಮಠವು ಕೈಗೊಳ್ಳುವ ಲೋಕಸೇವಾ ಕೈಂಕರ್ಯಗಳಿಗೆ ಸಲಹೆ-ಸೂಚನೆ ನೀಡುವ ಜೊತೆಗೆ ಮಠದ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಕೃಷ್ಣರವರು ಭೌತಿಕ ಶರೀರ ತೊರೆದಿರಬಹುದು. ಆದರೆ ಸಾಮಾಜಿಕ ಕ್ಷೇತ್ರದಲ್ಲಿ ಆದರ್ಶದ ಪಥವೊಂದನ್ನು ನಿರ್ಮಿಸಿ ಹೋಗಿದ್ದಾರೆ. ರಾಜಕೀಯ ಸಂತೆಯಲ್ಲಿ ಕೃಷ್ಣ ಅವರು ಒಬ್ಬ ಸಂತನಂತಾಗಿದ್ದರು. ಅವರೊಬ್ಬ ಯುವಜನಾಂಗ ಆ ಆದರ್ಶದ ಪಥದಲ್ಲಿ ಮುನ್ನಡೆಯುವಂತಾಗಲಿ. ಶ್ರೀಯುತರ ನಿಧನದಿಂದ ದುಃಖತಪ್ತರಾಗಿರುವ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನೂ, ಶ್ರೀಯುತರ ಆತ್ಮಕ್ಕೆಚಿರಶಾಂತಿಯನ್ನು ಭಗವಂತ ನೀಡಲೆಂದು ಆಶಿಸುತ್ತೇವೆ.