ಆದಿಚುಂಚನಗಿರಿ ಮಠ ಹಿಮಾಲಯ ಪರ್ವತದಂತೆ ಬೆಳೆಯುತ್ತಿದೆ: ಸ್ವಾಮೀಜಿ

KannadaprabhaNewsNetwork |  
Published : Dec 30, 2024, 01:03 AM IST
29ಕೆಎಂಎನ್ ಡಿ28 | Kannada Prabha

ಸಾರಾಂಶ

ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಭೈರವೈಕ್ಯಶ್ರೀಗಳು ಜವರನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಲ್ಲಿಯೇ ಸುಸಜ್ಜಿತ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಹುದೊಡ್ಡ ಕೊಡುಗೆ ನೀಡಿ ಹೋಗಿದ್ದಾರೆ. ಭೃಹದಾಕಾರವಾಗಿ ಬೆಳೆದು ನಿಂತಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥಶ್ರೀಗಳು ಶ್ರಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ದೂರದೃಷ್ಟಿಯಿಂದಾಗಿ ಆದಿಚುಂಚನಗಿರಿ ಮಠ ಹಿಮಾಲಯ ಪರ್ವತದಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎಂದು ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಹೇಳಿದರು.

ತಾಲೂಕಿನ ಜವರನಹಳ್ಳಿಯಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಶ್ರೀಅರಸಮ್ಮದೇವಿ 24ನೇ ದಿನದ ನಿತ್ಯ ಪೂಜಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಭೈರವೈಕ್ಯಶ್ರೀಗಳು ಜವರನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಲ್ಲಿಯೇ ಸುಸಜ್ಜಿತ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಹುದೊಡ್ಡ ಕೊಡುಗೆ ನೀಡಿ ಹೋಗಿದ್ದಾರೆ ಎಂದರು.

ಭೃಹದಾಕಾರವಾಗಿ ಬೆಳೆದು ನಿಂತಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥಶ್ರೀಗಳು ಶ್ರಮಿಸುತ್ತಿದ್ದಾರೆ ಎಂದರು.

ಧಾರವಾಡದ ಮುರುಘಾಮಠದ ಪೀಠಾಧ್ಯಕ್ಷ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನ ಪೀಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಕೆ.ಆರ್.ಪೇಟೆ ಶಾಸಕ ಮಂಜು, ಮಾಜಿ ಎಂಎಲ್‌ಸಿ ಅಪ್ಪಾಜಿಗೌಡ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಮಾತನಾಡಿ, ಓಡುವ ಕಾಲವನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾವಿಗೆ ಹೆದರಿ ಓಡುವುದನ್ನು ಬಿಟ್ಟು ಸಾವನ್ನು ಎದರಿಸಬೇಕೆಂದರೆ ನಮ್ಮ ಹೃದಯದಲ್ಲಿ ಧರ್ಮ ಸಂಗ್ರಹವಾಗಬೇಕು. ಇದು ಆಯಿತೆಂದರೆ ನಮ್ಮೊಳಗಿರುವ ಕ್ಲೇಷ ಅಡಗಿ ದ್ವೇಷ ಹೋಗಿ ಉತ್ತಮವಾದ ಬಾಂಧವ್ಯ ಬೆಳೆಯುತ್ತದೆ. ಆಗ ಸಾವೂ ಕೂಡ ಹತ್ತಿರ ಬರಲು ಹೆದರುತ್ತದೆ ಎಂದರು.

ಧರ್ಮ ಸಂಗ್ರಹದ ನಿಟ್ಟಿನಲ್ಲಿ ಬಹುದೊಡ್ಡ ಮೆಟ್ಟಿಲನ್ನು ನಮ್ಮ ಪೂರ್ವಿಕರು ದೇವಸ್ಥಾನದ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ದೇವರನ್ನು ಪೂಜಿಸುವ ನೆಪದಲ್ಲಿ ಎಲ್ಲೆಲ್ಲಿಯೂ ಇರುವ ಪರಮಾತ್ಮನನ್ನು ಸ್ಮರಿಸಬಹುದಾಗಿದೆ ಎಂದರು.

ದೇಶದಲ್ಲಿ ಇಷ್ಟೆಲ್ಲಾ ವಾಹನಗಳು ಜನಜೀವನ ಅಭಿವೃದ್ಧಿಯಾಗಿದೆ ಎಂದರೆ ಆರ್ಥಿಕ ಸುಧಾರಣೆಯಾಗಿರಬೇಕು. ಅಂತಹ ಆರ್ಥಿಕ ಸುಧಾರಣೆಯನ್ನು ಗ್ಲೋಬಲ್ ಹಂತದಲ್ಲಿ ತಂದು ದೇಶದ ಪ್ರತಿಯೊಬ್ಬರ ಮುಖದಲ್ಲಿ ನಗು ತುಂಬಿದೆ ಎಂದರೆ ಅದಕ್ಕೆ ಮೂಲ ಕಾರಣ ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಎಂದರು.

ಜಗತ್ತಿನ ಎಲ್ಲಾ ದೇಶಗಳಿಗಿಂತ ಅತಿಹೆಚ್ಚು ಆರ್ಥಿಕ ಸಂಪತ್ತು ಹೊಂದಿರುವ ಅಮೇರಿಕಾ ದೇಶ ಕಳೆದ 2008ರ ಸುಮಾರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವ ಸಂದರ್ಭವನ್ನು ತಪ್ಪಿಸಿ ಆರ್ಥಿಕ ಸಲಹೆ ಸುಧಾರಣೆ ನೀತಿ ಮತ್ತು ನಿಯಮಗಳನ್ನು ಒದಗಿಸಿಕೊಟ್ಟವರು ಭಾರತದ ಡಾ.ಮನಮೋಹನ್‌ಸಿಂಗ್ ಎಂದು ಅಂದಿನ ಅಮೆರಿಕಾ ಅಧಕ್ಷ ಒಬಾಮಾ ಹೇಳುತ್ತಾರೆಂದರೆ ಅವರು ಸಾಮಾನ್ಯವಾಗಿ ಕಾಣುವ ವ್ಯಕ್ತಿಯಲ್ಲ ಎಂದು ಮನಮೋಹನ್‌ಸಿಂಗ್ ಅವರ ಸಾಧನೆಯನ್ನು ಕೊಂಡಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ