ಬುದ್ಧ ವಿಹಾರದಲ್ಲಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೊಗೆಯಬೇಕು ಎಂದು ರಾಷ್ಟ್ರಕವಿ ಕುವೆಂಪು ಅವರು ಅಂದೇ ಕರೆ ನೀಡಿದ್ದರು ಎಂದು ಅಂಕಣಕಾರ ಬಿ.ಚಂದ್ರೇಗೌಡ ಹೇಳಿದರು. ತೇಗೂರಿನಲ್ಲಿರುವ ಬುದ್ಧ ವಿಹಾರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ಶಾಸ್ತ್ರೋಕ್ತವಾಗಿ ಆಗುವ ಮದುವೆಗಳಿಂದ ದೂರ ಸರಿದಿದ್ದ ಕುವೆಂಪು ಅವರೇ ಮಂತ್ರ ಮಾಂಗಲ್ಯವನ್ನು ರಚನೆ ಮಾಡಿದ್ದರು. ಅದರ ಮೊದಲ ಪ್ರಯೋಗ ಮಾಡಿದ್ದು ತಮ್ಮ ಮಗ ತೇಜಸ್ವಿ ಅವರ ಮೇಲೆ ಎಂದರು.
ತನ್ನ 22 ನೇ ವಯಸ್ಸಿನಲ್ಲಿ ಇಂಗ್ಲೀಷಿನಲ್ಲಿ ಬರೆದಿದ್ದ ಕವನವನ್ನು ಐರಿಸ್ ಕವಿಗೆ ತೋರಿಸುತ್ತಾರೆ ಕುವೆಂಪು. ಆಗ ಮಾತೃ ಭಾಷೆಯಲ್ಲಿಯೇ ಕವನ ಬರೆಯಲು ಹೇಳಿದಾಗ 67 ಕವನವನ್ನು ಕನ್ನಡದಲ್ಲಿ ಬರೆಯುತ್ತಾರೆ. ಪುರೋಹಿತ ಶಾಹಿಯ ವಿರುದ್ಧ ಒಂದು ಪ್ರತಿಭಟನಾ ಸಾಹಿತ್ಯ ಆರಂಭಿಸಿದವರು. ಪುರೋಹಿತಶಾಹಿ ಮನಸ್ಸಿನ ಬುರುಡೆಗೆ ಗುರಿಯಿಟ್ಟು ಗುಂಡು ಹೊಡೆಯದಿದ್ದರೆ ಅದು ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಅದರ ಸೂಚನೆಯನ್ನು ಈಗ ಕಾಣಬಹುದಾಗಿದೆ ಎಂದು ಹೇಳಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಚ್.ಎಂ. ರುದ್ರಸ್ವಾಮಿ ಮಾತನಾಡಿ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಕ್ರಾಂತಿ ಕಾರಕ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡಿದ ಕುವೆಂಪು ಅವರು ಸಾಮಾಜಿಕ ಪರಿವರ್ತನೆ ಹರಿಕಾರರು. ರೈತ ಕುಟುಂಬದಿಂದ ಬಂದಿದ್ದ ಅವರು ಶೋಷಣೆ ವಿರುದ್ಧ ಬಂಡಾಯವೆದ್ದ ಮಹಾಕವಿ. ಸಾಮಾಜಿಕ ಅನ್ಯಾಯ, ಶೋಷಣೆ, ದಬ್ಬಾಳಿಕೆ ವಿರುದ್ಧ ತಮ್ಮ ಕಥೆ, ಕಾವ್ಯ ಕವಿತೆಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. ರವೀಂದ್ರನಾಥ ಠಾಗೋರ್ ಮತ್ತು ಟಾಲ್ ಸ್ಟಾಯ್ ಅವರಿಗೆ ಸರಿಸಮನಾಗಿ ಕುವೆಂಪು ಬರೆದಿದ್ದಾರೆ. ಧಾರ್ಮಿಕ ಮೂಲ ಭೂತವಾದದ ವಿರುದ್ಧ ಬಂಡಾಯ ಏಳಬೇಕು ಎಂದು ಅವರು ಹೇಳಿದ್ದರು. ಸಾಂಸ್ಕೃತಿಕ ಬಂಡಾಯದ, ಆಧ್ಯಾತ್ಮಿಕ ಕ್ರಾಂತಿಕಾರಿ ಕವಿ ಕುವೆಂಪು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ನಾಡಗೀತೆ ರಚಿಸಿದ ಕುವೆಂಪು ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸಿದವರು. ಪ್ರಪಂಚಕ್ಕೆ ವಿಶ್ವ ಮಾನವ ಸಂದೇಶ ಸಾರಿದ ಜಗದ, ಯುಗದ, ರಾಷ್ಟ್ರ ಕವಿ ಕುವೆಂಪು ಎಂದು ಬಣ್ಣಿಸಿದರು. ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಾದರೂ ಜನಿಸಿದ್ದು ಅವರ ತಾಯಿಯ ಊರು ಕೊಪ್ಪ ತಾಲೂಕಿನ ಹಿರೇಕೂಡಿಗೆಯಲ್ಲಿ ಎಂದ ಅವರು, ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿದ ಕುವೆಂಪು ಅವರು ಅಸ್ಪೃಶ್ಯತಾ ಆಚರಣೆ ಬಗ್ಗೆ ಬರೆದ ಗ್ರಂಥಗಳನ್ನು ತಿರಸ್ಕರಿಸಬೇಕು. ಮತಾಂಧತೆ ದುಷ್ಪರಿಣಾಮದ ಬಗ್ಗೆ ಬರೆದಿದ್ದಾರೆ ಎಂದು ಹೇಳಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಕಾರ್ಯಕ್ರಮ ನಡೆಯುತ್ತಿರುವ ಈ ಜಾಗವನ್ನು ಅಧಿಕೃತಗೊಳಿಸಿಕೊಡುವ ಜವಾಬ್ದಾರಿ ಶಾಸಕ ತಮ್ಮಯ್ಯ ಅವರ ಮೇಲಿದೆ. ಅಧಿಕೃತಗೊಳಿಸಿ ಸಾಗುವಳಿ ಚೀಟಿ ಕೊಡಿಸಿ. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಹೇಳಿದರೆ ಖಂಡಿತ ಒಪ್ಪಿ ಕೊಳ್ಳುತ್ತಾರೆ ಎಂದು ಮನವಿ ಮಾಡಿದರು.ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕುವೆಂಪು ಅವರು ನುಡಿದಂತೆ ನಡೆದ ವ್ಯಕ್ತಿ. ನನ್ನ ಆರಾಧ್ಯ ಕವಿ. ಅವರು ಬರೆದಿರುವ ಅನೇಕ ಕವಿತೆಗಳಿಗೆ ಖ್ಯಾತ ಗಾಯಕ ಅಶ್ವತ್ಥ್ ಕಂಠದಾನ ಮಾಡಿದ್ದಾರೆ. ಅಶ್ವತ್ಥ್ ಅವರು ಡಿ.29 ರಂದೇ ಇದೇ ದಿನ ತೀರಿ ಕೊಂಡರು ಎಂದು ಹೇಳಿದರು.
ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎ.ಎನ್. ಮಹೇಶ್, ಬಿ.ಎಚ್.ಹರೀಶ್, ಶಿವಾನಂದಸ್ವಾಮಿ, ಮಂಜೇಗೌಡ, ಗುರುಶಾಂತಪ್ಪ, ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಸೂರಿ ಶ್ರೀನಿವಾಸ್, ರವೀಶ್, ಪರಮೇಶ್ವರ್, ಅನಿಲ್‌ಕುಮಾರ್, ಅನಂತ್, ಲಕ್ಷ್ಮಣ, ಹರೀಶ್ ಉಪಸ್ಥಿತರಿದ್ದರು. 29 ಕೆಸಿಕೆಎಂ 5ಚಿಕ್ಕಮಗಳೂರು ಸಮೀಪದ ತೇಗೂರಿನಲ್ಲಿರುವ ಬುದ್ಧ ವಿಹಾರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆ ಭಾನುವಾರ ನಡೆದ ಕುವೆಂಪು ಜನ್ಮ ದಿನಾಚರಣೆಯನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಅಂಕಣಕಾರ ಬಿ. ಚಂದ್ರೇಗೌಡ, ಡಾ. ಜೆ.ಪಿ. ಕೃಷ್ಣೇಗೌಡ, ಬಿ.ಬಿ. ನಿಂಗಯ್ಯ, ಎಚ್.ಎಚ್. ದೇವರಾಜ್, ಬಿ.ಎಚ್. ಹರೀಶ್ ಇದ್ದರು.