ಗೋಪಾಲಸ್ವಾಮಿ ಬೆಟ್ಟ: ಗೂಡಂಗಡಿ ತೆರವಿಗೆ ನೋಟಿಸ್‌

KannadaprabhaNewsNetwork | Published : Dec 30, 2024 1:03 AM

ಸಾರಾಂಶ

ತಾಲೂಕಿನ ಸೂಕ್ಷ್ಮ ಪರಿಸರ ವಲಯದಲ್ಲಿರುವ ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ರಸ್ತೆಯ ಒಂದು ಬದಿಯಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಹಲವು ವರ್ಷಗಳ ಬಳಿಕ ಬಂಡೀಪುರ ಅರಣ್ಯ ಇಲಾಖೆ ತೆರವುಗೊಳಿಸಲು ಮುಂದಾಗಿದೆ!

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಸೂಕ್ಷ್ಮ ಪರಿಸರ ವಲಯದಲ್ಲಿರುವ ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ರಸ್ತೆಯ ಒಂದು ಬದಿಯಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಹಲವು ವರ್ಷಗಳ ಬಳಿಕ ಬಂಡೀಪುರ ಅರಣ್ಯ ಇಲಾಖೆ ತೆರವುಗೊಳಿಸಲು ಮುಂದಾಗಿದೆ! ಈ ಸಂಬಂಧ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್‌ ತಹಸೀಲ್ದಾರ್‌ ಟಿ.ರಮೇಶ್‌ ಬಾಬುಗೆ ಪತ್ರ ಬರೆದು ಅನಧಿಕೃತವಾಗಿ ತಲೆ ಎತ್ತಿರುವ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೆ ಅನಧಿಕೃತ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಂಡಲ್‌, ಇತರೆ ಪ್ಲಾಸ್ಟಿಕ್‌ ವಸ್ತುಗಳನ್ನು ಮಾರಾಟ ಮಾಡಿ ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳನ್ನು ಬಿಸಾಡಿ ಪರಿಸರಕ್ಕೆ ಹಾನಿಗೆ ಕಾರಣವಾಗಿದೆ. ರಸ್ತೆ ಬದಿ ಬ್ಯಾನರ್ ಕಟ್ಟಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವುದು, ಅಂಗಡಿ ತೆರೆಯುವುದು ಕಾನೂನು ಬಾಹಿರವಾಗಿರುವ ಕಾರಣ ರಸ್ತೆ ಅನಧಿಕೃತವಾಗಿ ಗೂಡಂಗಡಿಗಳು ಹಾಗು ರಸ್ತೆ ಮಧ್ಯದಲ್ಲಿ ಹಾಕಿರುವ ಬ್ಯಾನರ್‌ಗಳ ತೆರವುಗೊಳಿಸಬೇಕು ಎಂದು ಪತ್ರ ಬರೆದಿದ್ದಾರೆ.

ಅರಣ್ಯ ಇಲಾಖೆಯ ಮನವಿಗೆ ಸ್ಪಂದಿಸಿರುವ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಬೆಟ್ಟದ ತಪ್ಪಲಿನ ಬಳಿ ೧೪ ಗೂಡಂಗಡಿ ನಡೆಸುತ್ತಿರುವವರಿಗೆ ನೋಟಿಸ್‌ ನೀಡಿದ್ದು, ಕಳೆದ ಡಿ.೨೬ ರಂದು ವಿಚಾರಣೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದರು.

ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಅವರು ಗೂಡಂಗಡಿಗೆ ನೀಡಿರುವ ನೋಟಿಸ್‌ನಲ್ಲಿ ಕಳ್ಳೀಪುರ ಸ.ನಂ.೫೨ ರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಅಂಗಡಿ ತೆರೆದಿರುವುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ ಕಲಂ ೧೦೪ ರ ಪ್ರಕಾರ ಸಭೆ ಕರೆದಿದ್ದು, ಸಭೆಗೆ ಹಾಜರಾದ ಬಳಿಕ ಮುಂದಿನ ಜ.೨೧ ರಂದು ಮತ್ತೊಂದು ಸಭೆ ಕರೆದಿದ್ದಾರೆ.

ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ರಸ್ತೆ ಬದಿ ಇರುವ ಗೂಡಂಗಡಿ ತೆರವುಗೊಳಿಸಬೇಕು ಎಂದು ತಹಸೀಲ್ದಾರ್‌ಗೆ ಪತ್ರ ಬರೆದಿದ್ದೇನೆ. ತಹಸೀಲ್ದಾರ್‌ ನೋಟಿಸ್‌ ನೀಡಿದ್ದಾರೆ.

ಬಿ.ಎಂ.ಮಲ್ಲೇಶ್‌ ಆರ್‌ಎಫ್‌ಒ

ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿಗಳು ನೀಡಿದ ದೂರಿನ ಮೇರೆಗೆ ನೋಟಿಸ್‌ ನೀಡಲಾಗಿದೆ. ಮತ್ತೊಂದು ಸಭೆ ನಡೆಸಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ಟಿ.ರಮೇಶ್‌ ಬಾಬು ತಹಸೀಲ್ದಾರ್

Share this article