ರಾಚೋಟೇಶ್ವರ ನಗರದ ರಿ.ಸ. ನಂ 323/4ರ ಪ್ಲಾಟ್ ನಂ. 48ರ ಉದ್ಯಾನವನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡಲು ಪ್ರಯತ್ನ ನಡೆಯುತ್ತಿದೆ.

ಗದಗ: ಸ್ಥಳೀಯ ರಾಚೋಟೇಶ್ವರ ನಗರದಲ್ಲಿರುವ ನಗರಸಭೆ ಉದ್ಯಾನವನದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿರುವವರನ್ನು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಲ್ಲಿಯ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಚೋಟೇಶ್ವರ ನಗರ ಕ್ಷೇಮಾಭಿವೃದ್ದಿ ಟ್ರಸ್ಟ್‌ ಅಧ್ಯಕ್ಷ ರವಿ ಗುಂಜೀಕರ ಮಾತನಾಡಿ, ರಾಚೋಟೇಶ್ವರ ನಗರದ ರಿ.ಸ. ನಂ 323/4ರ ಪ್ಲಾಟ್ ನಂ. 48ರ ಉದ್ಯಾನವನದಲ್ಲಿ ಅನಾಮಿಕ ವ್ಯಕ್ತಿಗಳಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಭೂಕಬಳಿಕೆ ಮಾಡಲು ಪ್ರಯತ್ನ ನಡೆಯುತ್ತಿದೆ. ಈ ಉದ್ಯಾನವನವನ್ನು ಕಬಳಿಸುವ ಉದ್ದೇಶದಿಂದ ಪ್ಲಾಟ್ ನಂ. 48ರ ಉದ್ಯಾನವನ ಜಾಗದಲ್ಲಿ ಹೆಚ್ಚುವರಿಯಾಗಿ ತಾವೇ ಪ್ಲಾಟ್ ನಂ. 49, 50, 51, 52 ಎಂದು ನಾಲ್ಕು ಹೆಚ್ಚುವರಿ ಪ್ಲಾಟ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು ಕೈಗೂಡಿ ಹೆಚ್ಚುವರಿ ಆಸ್ತಿಗಳಿಗೆ ಕಾನೂನುಬಾಹಿರ ಫಾರ್ಮ್ ನಂ. 3 ತಯಾರಿಸಿಕೊಟ್ಟಿರುವ ನಗರಸಭೆ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಈ ಹಿಂದೆ ಲೇಔಟ್‌ನ ಮೂಲ ಮಾಲೀಕರಾದ ನಿಲೂಗಲ್ ಎಂಬುವರು ಚಪ್ಪರಮಠ ಎಂಬವರಿಗೆ ಎನ್ಎ, ಕೆಜಿಪಿ ಮಾಡಲು ನೀಡಿದ್ದರು. ನಂತರ ಪವರ್ ಆಫ್‌ ಅಟಾರ್ನಿ ಮೂಲಕ ಬಿಜಾಪುರ ಎಂಬವರು 48 ಪ್ಲಾಟ್‌ಗಳ ಲೇಔಟ್‌ನ್ನು ನಿರ್ಮಾಣ ಮಾಡಿ 1985ರಲ್ಲಿ ಮಾರಾಟ ಮಾಡಿದ್ದರು. 2024ರಲ್ಲಿ ಕೆಲವು ಅನಾಮಿಕ ವ್ಯಕ್ತಿಗಳು ಪ್ಲಾಟ್ ನಂ. 48 ಉದ್ಯಾನವನದಲ್ಲಿ 49, 50, 51, 52 ಹೆಚ್ಚುವರಿ ಪ್ಲಾಟ್‌ಗಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಫಾರ್ಮ್ ನಂ. 3 ಪಡೆದಿದ್ದಾರೆ.

ಆದರೆ, ನಗರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸದೆ, ಚೌಕಾಸಿ ಮಾಡದೆ ಫಾರ್ಮ್ ನಂ. 3 ನೀಡಿ ಭ್ರಷ್ಟಾಚಾರ ನಡೆಸಿದ್ದಾರೆ. ಅಲ್ಲದೆ, ನಗರಾಭಿವೃದ್ಧಿ ಯೋಜನೆ ಇಲಾಖೆಯಲ್ಲಿ ಈ ಪ್ಲಾಟ್ ಕುರಿತು 48 ಪ್ಲಾಟ್‌ಗಳನ್ನು ಮಾತ್ರ ಹೊಂದಿದ್ದು, ಹೆಚ್ಚುವರಿ ವಿನ್ಯಾಸ ಆಗಿಲ್ಲ ಎಂದು ಹೇಳಿರುವುದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮವಹಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನಕಲಿ ದಾಖಲೆ ಸೃಷ್ಟಿಸಿ ನಾಲ್ಕು ಪ್ಲಾಟ್‌ಗಳನ್ನು ಕಬಳಿಸುತ್ತಿರುವ ಮೇಲೆ ಕ್ರಮ ಕೈಗೊಂಡು ಅವುಗಳನ್ನು ರದ್ದುಗೊಳಿಸಿ ಉದ್ಯಾನವವನ್ನು ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ಒಂದು ವಾರದೊಳಗೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಲೆ ಎಸ್.ಆರ್. ಹಿರೇಮಠ, ಎಸ್.ಪಿ. ಪಾವನ, ಅಂಬರೀಷ ಇಟಗಿ, ಶರಣು ಬೋಳನವರ, ಬಸವರಾಜ ಹಡಪದ, ರಾಜು ಖಾನಪ್ಪನವರ, ಕುಮಾರ ಮಾರನಬಸರಿ, ಮಲ್ಲಪ್ಪ ಕತ್ತಿ, ಮಂಜುನಾಥ ಮಾನೆ, ಚೇತನ ಬಳ್ಳಾರಿ, ಆನಂದ ಶೇಠ, ಬಿ.ಎಸ್. ಕುಂಬಾರಗೇರಿಮಠ, ಈಶ್ವರ ಹಿರೇಮಠ, ಚನ್ನಯ್ಯ ಹಿರೇಮಠ, ಮನೋಜ ಪಾವನ, ಗಿಡ್ಡಹನುಮಣ್ಣವರ, ಎನ್.ಎನ್. ಹಿರೇಮಠ, ಗಂಗಾಧರ ಮೇಲಗಿರಿ ಸೇರಿದಂತೆ ಮುಂತಾದವರು ಇದ್ದರು.