ಶಿಕ್ಷಣ ನಮಗೆ ಜ್ಞಾನ ನೀಡುತ್ತದೆ. ಪ್ರಪಂಚದ ಆಗುಹೋಗು ಪರಿಚಯಿಸುತ್ತದೆ. ನಮ್ಮ ಹಕ್ಕು, ಕರ್ತವ್ಯ, ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ.
ಕೊಪ್ಪಳ: ಅರಿವೇ ಬದುಕು, ಅಜ್ಞಾನವೇ ಸಾವು ಎಂಬ ಮಾತಿನಂತೆ ಶಿಕ್ಷಣದಿಂದ ಮಾತ್ರ ನಮಗೆ ಪ್ರಪಂಚದ ಜ್ಞಾನ ಬೆಳೆಯಲು ಸಾಧ್ಯ. ಶಿಕ್ಷಣ ಶಕ್ತಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ವಿಯಾಗಬಹುದು. ಮಹಿಳೆಯರು ಸುಶಿಕ್ಷಿತರಾಗಲೇಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಪಂ,ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಯೋಗದ ಅಧ್ಯಕ್ಷರು ಹಾಗೂ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಶಿಕ್ಷಣ ನಮಗೆ ಜ್ಞಾನ ನೀಡುತ್ತದೆ. ಪ್ರಪಂಚದ ಆಗುಹೋಗು ಪರಿಚಯಿಸುತ್ತದೆ. ನಮ್ಮ ಹಕ್ಕು, ಕರ್ತವ್ಯ, ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರೂ ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು. ಶಿಕ್ಷಣ ಶಕ್ತಿಯಾಗಿ ಬಳಸಿಕೊಳ್ಳಬೇಕು. ಓದುವ ವಯಸ್ಸಿನಲ್ಲಿ ಅನಗತ್ಯ ಆಕರ್ಷಣೆ, ಆಮೀಷಕ್ಕೆ ಒಳಗಾಗದೇ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಿ ಪರಿಶ್ರಮದಿಂದ ಬದುಕಲ್ಲಿ ಯಶಸ್ವಿಯಾಗಬೇಕು.ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ಶ್ರಮ ಮತ್ತು ಶ್ರದ್ಧೆಯೇ ಯಶಸ್ಸಿನ ಮೂಲಮಂತ್ರ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಚಿಕ್ಕಮಕ್ಕಳಿಂದ ವೃದ್ಧರವರೆಗೂ ಅತ್ಯಂತ ಆಕರ್ಷಿತ ಮಾಧ್ಯಮವೆಂದರೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಪ್ ನಂತಹ ಸಾಮಾಜಿಕ ಮಾಧ್ಯಮ ಹಾಗೂ ರೀಲ್ಸ್‌ಗಳು. ಮಹಿಳೆಯರು ಭಾವನಾತ್ಮಕ ಜೀವಿಗಳಾದ್ದರಿಂದ ವಂಚಕರು ಇಂತಹ ಸಾಮಾಜಿಕ ಮಾಧ್ಯಮ ದಾಳವಾಗಿಸಿಕೊಂಡು ಅಮಾಯಕ ಹುಡುಗಿ, ಮಹಿಳೆಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ನಂಬಿಸಿ ಮೋಸ ಮಾಡುತ್ತಾರೆ. ಕೆಲ ಸಂದರ್ಭಗಳಲ್ಲಿ ಬ್ಲಾಕ್‌ಮೇಲ್ ಮಾಡಿ, ಹುಡುಗಿಯರನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳುತ್ತಾರೆ. ಇದರಿಂದ ಮೋಸ ಹೋದ ಹುಡುಗಿಯರು, ಮಹಿಳೆಯರು ಬೇಸತ್ತು ಜೀವ ಕಳೆದುಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಯಿಂದ ಬರುವ ಸ್ನೇಹದ ಪ್ರಸ್ತಾಪ ಒಪ್ಪಿಕೊಳ್ಳಬಾರದು, ಅಪರಿಚಿತರೊಂದಿಗೆ ಅನಗತ್ಯ ಸಂಪರ್ಕ ಬೆಳೆಸಬಾರದು. ಇಂದಿನ ಇಂಟರ್‌ನೆಟ್, ಸಾಮಾಜಿಕ ಮಾಧ್ಯಮಗಳ ಶಕ್ತಿ ನಿಮ್ಮ ಶಿಕ್ಷಣಕ್ಕೆ, ಭವಿಷ್ಯಕ್ಕೆ ಪೂರಕವಾಗುವಂತೆ ಸಕಾರಾತ್ಮಕವಾಗಿ ಬಳಸಿಕೊಳ್ಳಿ. ಒಂದು ವೇಳೆ ಸೈಬರ್ ವಂಚನೆಗೆ ಒಳಗಾದಲ್ಲಿ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಸಂಪರ್ಕಿಸಿ ದೂರು ದಾಖಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಮಕ್ಕಳ ಸಹಾಯವಾಣಿ 1098ಗೆ ಅಥವಾ ಪೊಲೀಸ್ ಇಲಾಖೆ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಅಧ್ಯಕ್ಷರೊಂದಿಗೆ ಸಂವಾದ ನಡೆಸುತ್ತಾ ತಮ್ಮ ಊರು, ಕಾಲೇಜಿನಲ್ಲಿರುವ ಮೂಲಭೂತ ಸೌಕರ್ಯದ ಕೊರತೆಗಳ ಬಗ್ಗೆ ದೂರುಗಳನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ.ಶೆಟ್ಟೆಪ್ಪನವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.