ಕುವೆಂಪು ವೈಚಾರಿಕ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ: ಎಂ.ಶಿವಮಾದು

KannadaprabhaNewsNetwork | Published : Dec 30, 2024 1:03 AM

ಸಾರಾಂಶ

ಮಹಾಕವಿಯಾಗಿ, ದಾರ್ಶನಿಕರಾಗಿ, ಶಿಕ್ಷಣ ತಜ್ಞರಾಗಿ ವಿವಿಧ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ರಾಷ್ಟ್ರಕವಿ ಕುವೆಂಪುರವರು ಮನುಜಮತ ವಿಶ್ವಪಥ ಎಂಬ ಘೋಷಣೆಯ ಮೂಲಕ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ್ದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಅಸಹಿಷ್ಣುತೆ, ಕೋಮು ಗಲಭೆ, ಮತೀಯ ಸಂಘರ್ಷಗಳು ಹೊಗೆಯಾಡುತ್ತಿರುವ ಇಂದಿನ ದಿನಗಳಲ್ಲಿ ಕುವೆಂಪುರವರ ಸಾಹಿತ್ಯದ ವೈಚಾರಿಕ ಮೌಲ್ಯಗಳು ಹೆಚ್ಚು ಪ್ರಸ್ತುತ ಎಂದು ಶುಭೋದಯ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಎಂ. ಶಿವಮಾದು ಅಭಿಪ್ರಾಯಪಟ್ಟರು.

ರಸಋಷಿ ಕುವೆಂಪುರವರ ೧೨೦ನೇ ಜನ್ಮದಿನಾಚರಣೆ ಪ್ರಯುಕ್ತ ಶುಭೋದಯ ಸಾಂಸ್ಕೃತಿಕ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಗಾಂಧಿ ಭವನದ ಬಳಿ ಇರುವ ಕುವೆಂಪು ಪ್ರತಿಮೆಗೆ ಪುಷ್ಪಮಾಲಿಕೆ ಅರ್ಪಿಸಿ, ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಕುವೆಂಪುರವರು ಕನ್ನಡದ ಸತ್ವವನ್ನು ಹೆಚ್ಚಿಸಿ ಕನ್ನಡಕ್ಕೆ ಹಿರಿಮೆ, ಗರಿಮೆಯನ್ನು ತಂದ ಮಹಾಕವಿ, ಅವರ ಬದುಕಿನ ಆಚಾರ, ವಿಚಾರ, ಆದರ್ಶಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಂಡು ಮುನ್ನಡೆಯಬೇಕಿದೆ ಎಂದರು.

ಕುವೆಂಪು ಕುರಿತು ಉಪನ್ಯಾಸ ನೀಡಿದ ಶುಭೋದಯ ಸಾಂಸ್ಕೃತಿಕ ಬಳಗದ ಸಂಘಟನಾ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಮಹಾಕವಿಯಾಗಿ, ದಾರ್ಶನಿಕರಾಗಿ, ಶಿಕ್ಷಣ ತಜ್ಞರಾಗಿ ವಿವಿಧ ರಂಗಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ರಾಷ್ಟ್ರಕವಿ ಕುವೆಂಪುರವರು ಮನುಜಮತ ವಿಶ್ವಪಥ ಎಂಬ ಘೋಷಣೆಯ ಮೂಲಕ ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ್ದರು. ಅವರ ಆದರ್ಶ ಬದುಕನ್ನು ಅನುಸರಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು.

ನಗರ ಆರಕ್ಷಕ ವೃತ್ತ ನಿರೀಕ್ಷಕ ಹರೀಶ್ ಮಾತನಾಡಿ, ಕುವೆಂಪು ಅವರ ಚಿಂತನೆಗಳು ಸಾರ್ವಕಾಲಿಕ. ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೌಢ್ಯತೆ, ಅಂಧ ವಿಶ್ವಾಸಗಳು, ಪುರೋಹಿತಶಾಹಿ ವ್ಯವಸ್ಥೆಯ ಕರಾಳ ಮುಖಗಳನ್ನು ಕಿತ್ತೆಸೆದು, ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಕುವೆಂಪು ಅವರ ಪಾತ್ರ ಹಿರಿದು. ಅವರು ತಮ್ಮ ಕೃತಿಗಳ ಮೂಲಕ ಸಾಮಾಜಿಕ ಆಂದೋಲನಕ್ಕೆ ಮುನ್ನುಡಿ ಬರೆದಿದ್ದರು ಎಂದರು.

ಶುಭೋದಯ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ರಾಂಪುರ ಮಲ್ಲೇಶ್ ಮಾತನಾಡಿದರು.

ಬಳಗದ ಗೌರವಾಧ್ಯಕ್ಷ ಹಾಪ್ ಕಾಮ್ಸ್ ಸಿದ್ದಪ್ಪ , ಉಪಾಧ್ಯಕ್ಷರಾದ ಬಿ.ಪುಟ್ಟಲಿಂಗಯ್ಯ, ಖಜಾಂಚಿ ಸಿ.ಎಸ್. ಶ್ರೀಕಂಠಯ್ಯ, ಪದಾಧಿಕಾರಿಗಳಾದ ನಿವೃತ್ತ ಶಿಕ್ಷಕ ಸೋಗಲ ರಾಮು, ಸಿ.ಕೆ.ಕೃಷ್ಣಯ್ಯ, ನಿವೃತ್ತ ಶಿಶು ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ, ನಿವೃತ್ತ ತೋಟಗಾರಿಕಾ ಅಧಿಕಾರಿ ಎಚ್ .ಆರ್. ರಾಮಚಂದ್ರಯ್ಯ , ನಿವೃತ್ತ ಶಿಕ್ಷಕರಾದ ಸಿದ್ದಪ್ಪ, ಪ್ರಕಾಶ್ ರೆಡ್ಡಿ, ಚಿಕ್ಕೇಗೌಡ, ಇತರರು ಇದ್ದರು.

Share this article