ದಾವಣಗೆರೆ : ಮಟ್ಕಾ ಜೂಜಾಟಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಚನ್ನಗಿರಿ ಪೊಲೀಸ್ ಠಾಣೆಗೆ ಕರೆ ತಂದಿದ್ದ ಆದಿಲ್ ಸಾವಿನ ಪ್ರಕರಣ ಸಿಐಡಿಗೆ ವರ್ಗಾಯಿಸಲಾಗಿದ್ದು, ಈಗಾಗಲೇ ಸಿಐಡಿ ತಂಡ ತನಿಖೆ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಲ್ ಸಾವಿನ ಹಿನ್ನೆಲೆ ಕುಟುಂಬಸ್ಥರು, ಸಮುದಾಯದವರು ಶವವನ್ನು ಠಾಣೆಯಲ್ಲಿಟ್ಟು ಪ್ರತಿಭಟಿಸಿದ್ದು, ಕೆಲ ಉದ್ರಿಕ್ತರಿಂದ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಸರ್ಕಾರಿ ಸ್ವತ್ತು ಧ್ವಂಸ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಪೊಲೀಸರನ್ನು ಗಾಯಗೊಳಿಸಿದ್ದು ಸೇರಿದಂತೆ 4 ಪ್ರಕರಣದಲ್ಲಿ ಈವರೆಗೆ 25 ಜನರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿದರು.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ವಿರುದ್ಧ ಹಿಂದೆ ಯಾವುದೇ ಹಳೆಯ ಕೇಸ್‌ಗಳು ಇಲ್ಲ. ಗುಂಪಿನಲ್ಲಿ ಕೆಲ ಯುವಕರು ಇಂತಹ ವರ್ತನೆ ತೋರಿದ್ದಾರೆ. ಚನ್ನಗಿರಿ ಪಟ್ಟಣ, ಹೊನ್ನೆಬಾಗಿ, ನಲ್ಲೂರು ಸೇರಿದಂತೆ ವಿವಿಧ ಹಳ್ಳಿಗಳಿಂದ ಬಂದಿದ್ದ ಯುವಕರು ಗುಂಪಿನಲ್ಲಿದ್ದರು. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 353 ಮತ್ತು 307 ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದ ಅವರು, 2-3 ದಿನಗಳಲ್ಲೇ ಮೃತ ಆದಿಲ್‌ನ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ವರದಿ ಕೈಸೇರುವ ಸಾಧ್ಯತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ
ಚನ್ನಗಿರಿ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಧಾರ್ಮಿಕ ನಿಂದನೆ, ವ್ಯಕ್ತಿ ನಿಂದನೆ ಪೋಸ್ಚ್‌ಗಳು, ಪ್ರಚೋದನಾಕಾರಿ ಹೇಳಿಕೆಗಳು, ಪೋಸ್ಟ್‌ಗಳು, ವೀಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಬಾರದು ಎಂದು ಎಸ್‌ಪಿ ಉಮಾ ಪ್ರಶಾಂತ್ ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಧೆಗೆ ಧಕ್ಕೆ ಬರುವಂತಹ ಪೋಸ್ಟ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾದ್ಯಂತ ವಾಟ್ಸಪ್, ಫೇಸ್ ಬುಕ್, ಮೆಸ್ಸೆಂಜರ್, ಎಸ್‌ಎಂಎಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ ಎಂದರು.