ಆದಿತ್ಯರಾಜ್‌ ಕ್ಯಾಪಿಟಲ್‌ ಕಚೇರಿ ಮೇಲೆ ದಾಳಿ

KannadaprabhaNewsNetwork |  
Published : Jun 05, 2026, 03:00 AM IST
ಕೇರಳ ಸಿಎಂ  | Kannada Prabha

ಸಾರಾಂಶ

ಶಿವಂ ಅಸೋಸಿಯೇಟ್ಸ್ ಬಹುಕೋಟಿ ರುಪಾಯಿ ವಂಚನೆ ಪ್ರಕರಣದ ತನಿಖೆ ಇನ್ನೂ ಮುಂದುವರಿದಿರುವ ನಡುವೆಯೇ ಬೆಳಗಾವಿಯಲ್ಲಿ ಮತ್ತೊಂದು ಖಾಸಗಿ ಹಣಕಾಸು ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಭಾಗ್ಯನಗರದ 5ನೇ ಕ್ರಾಸ್‌ನಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಿವಂ ಅಸೋಸಿಯೇಟ್ಸ್ ಬಹುಕೋಟಿ ರುಪಾಯಿ ವಂಚನೆ ಪ್ರಕರಣದ ತನಿಖೆ ಇನ್ನೂ ಮುಂದುವರಿದಿರುವ ನಡುವೆಯೇ ಬೆಳಗಾವಿಯಲ್ಲಿ ಮತ್ತೊಂದು ಖಾಸಗಿ ಹಣಕಾಸು ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಕೋಟ್ಯಂತರ ರುಪಾಯಿ ಠೇವಣಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಭಾಗ್ಯನಗರದ 5ನೇ ಕ್ರಾಸ್‌ನಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ತಿಳಕವಾಡಿ ಪೊಲೀಸ್ ಠಾಣೆ ಅಧಿಕಾರಿಗಳ ತಂಡ ದಾಳಿ ನಡೆಸಿ ಸಂಸ್ಥೆಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದೆ. ದಾಳಿ ವೇಳೆ ನೂರಾರು ಕೋಟಿ ರುಪಾಯಿ ಮೊತ್ತದ ಆನ್‌ಲೈನ್ ಹಣ ವರ್ಗಾವಣೆ ನಡೆದಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.ಮಹಾರಾಷ್ಟ್ರ ಮೂಲದ ಬಲರಾಮ್ ಮಾನೆ ಎಂಬುವರ ಒಡೆತನದ ಕಂಪನಿ ಇದಾಗಿದೆ. ಸಂಸ್ಥೆಯು ಸಾರ್ವಜನಿಕರಿಗೆ ಪ್ರತಿ ತಿಂಗಳು ಶೇ. 5ರಷ್ಟು ಬಡ್ಡಿ ನೀಡುವುದಾಗಿ ಹಾಗೂ ₹1 ಲಕ್ಷ ಹೂಡಿಕೆಗೆ ತಿಂಗಳಿಗೆ ₹3 ಸಾವಿರ ಆದಾಯದ ಭರವಸೆ ನೀಡುತ್ತಿತ್ತು ಎನ್ನಲಾಗಿದೆ. ಇಂತಹ ಅಸಾಮಾನ್ಯ ಲಾಭದ ಆಮಿಷವೊಡ್ಡಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ.ಸಂಸ್ಥೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಇತರೆ ಯಾವುದೇ ನಿಯಂತ್ರಣ ಸಂಸ್ಥೆಗಳಿಂದ ಸಾರ್ವಜನಿಕ ಠೇವಣಿ ಸಂಗ್ರಹಿಸಲು ಅನುಮತಿ ಪಡೆದಿರುವ ದಾಖಲೆಗಳು ಲಭ್ಯವಾಗಿಲ್ಲ. ಆದರೂ ಸಂಸ್ಥೆ ಹಲವು ಪ್ರಚಾರ ಕಾರ್ಯಕ್ರಮಗಳು, ಸಭೆಗಳು ಹಾಗೂ ವೆಬ್‌ಸೈಟ್ ಮೂಲಕ ಜನರನ್ನು ಹೂಡಿಕೆಗೆ ಆಕರ್ಷಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಧಿಕಾರಿಗಳ ದಾಳಿ ನಡೆಯುತ್ತಿದ್ದ ವೇಳೆ ಸಂಸ್ಥೆಯ ವೆಬ್‌ಸೈಟ್ ಸ್ಥಗಿತಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಂಸ್ಥೆಯ ಹಣಕಾಸು ವ್ಯವಹಾರಗಳು, ಹೂಡಿಕೆದಾರರ ಸಂಖ್ಯೆ, ಸಂಗ್ರಹಿಸಿರುವ ಹಣದ ಮೊತ್ತ ಹಾಗೂ ಹಣದ ಹರಿವಿನ ಮೂಲಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಶಿವಂ ಅಸೋಸಿಯೇಟ್ಸ್ ಪ್ರಕರಣದಿಂದಲೇ ಬೆಳಗಾವಿ ಜಿಲ್ಲೆಯಲ್ಲಿ ಹೂಡಿಕೆ ಯೋಜನೆಗಳ ಹೆಸರಿನಲ್ಲಿ ನಡೆಯುವ ಅಕ್ರಮ ಹಣ ಸಂಗ್ರಹ ಚಟುವಟಿಕೆಗಳ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿತ್ತು. ಇದೀಗ ಮತ್ತೊಂದು ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾರ್ವಜನಿಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.ಯಾವುದೇ ಸಂಸ್ಥೆ ಬ್ಯಾಂಕ್‌ಗಳಿಗಿಂತ ಹಲವು ಪಟ್ಟು ಹೆಚ್ಚು ಬಡ್ಡಿ ನೀಡುವ ಭರವಸೆ ನೀಡಿದರೆ ಹೂಡಿಕೆದಾರರು ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸಂಸ್ಥೆಯ ನೋಂದಣಿ, ನಿಯಂತ್ರಣ ಸಂಸ್ಥೆಗಳ ಅನುಮತಿ ಹಾಗೂ ವ್ಯವಹಾರಗಳ ಪಾರದರ್ಶಕತೆಯನ್ನು ಪರಿಶೀಲಿಸದೇಹಣ ಹೂಡಿಕೆ ಮಾಡುವುದರಿಂದ ದೊಡ್ಡ ಪ್ರಮಾಣದ ನಷ್ಟ ಸಂಭವಿಸುವ ಸಾಧ್ಯತೆ ಇದೆ.ಪ್ರಸ್ತುತ ದಾಳಿ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳು ಹಾಗೂ ಡಿಜಿಟಲ್ ಮಾಹಿತಿ ಆಧರಿಸಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಸಂಸ್ಥೆಯ ವಿರುದ್ಧ ವಂಚನೆ, ಅಕ್ರಮ ಠೇವಣಿ ಸಂಗ್ರಹ ಮತ್ತು ಇತರೆ ಕಾನೂನು ಉಲ್ಲಂಘನೆಗಳ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ತನಿಖೆ ಪೂರ್ಣಗೊಂಡ ಬಳಿಕ ಮಾತ್ರ ವಂಚನೆಯ ನಿಖರ ಪ್ರಮಾಣ ಹಾಗೂ ಎಷ್ಟು ಜನರು ಹಣ ಹೂಡಿಕೆ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಲಿದೆ. ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣದ ಗಾಯ ಇನ್ನೂ ಮಾಸದಿರುವಾಗಲೇ ಮತ್ತೊಂದು ಸಂಸ್ಥೆಯ ವಿರುದ್ಧ ಕೇಳಿಬಂದಿರುವ ಆರೋಪಗಳು ಬೆಳಗಾವಿಯ ಹೂಡಿಕೆದಾರರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರು ಜನ ಹತ್ಯೆ: ಮತ್ತೆ 6 ಆರೋಪಿಗಳ ಸೆರೆ
ನ್ಯಾಯಾಧೀಕರಣದ ತೀರ್ಪಿನ ಬಗ್ಗೆ 8ಕ್ಕೆ ವಿಚಾರ ಸಂಕಿರಣ