ಹಳೆ ಟ್ಯಾಂಕ್‌ ತೆರವಿಗೆ ಆಡಳಿತ ಮೀನಾಮೇಷ

KannadaprabhaNewsNetwork | Published : May 23, 2024 1:01 AM

ಸಾರಾಂಶ

ಈ ನೀರಿನ ಟ್ಯಾಂಕ್‌ ಬಿದ್ದರೆ ಪ್ರಾಣ ಹಾನಿ ಸಂಭವಿಸಬಹುದಾಗಿದೆ. ಈಗಲೂ ನೀರಿನ ಟ್ಯಾಂಕ್‌ಗೆ ನೀರನ್ನು ತುಂಬಿಸಿ 750 ಕುಟುಂಬಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವಠಾರದಲ್ಲಿನ 50000 ಲೀ ಸಾಮರ್ಥ್ಯದ ಹಳೆಯ ಟ್ಯಾಂಕ್ ಅನ್ನು ತಾಲೂಕು ಪಂಚಾಯಿತಿ ಆಡಳಿತ ತೆರವು ಗೊಳಿಸಲು ಮೀನಾಮೇಷ ಎಣಿಸುತ್ತಿದೆ. ಈಗಾಗಲೇ ಪಂಚಾಯಿತಿ ವತಿಯಿಂದ ಅನೇಕ ಬಾರಿ ಮನವಿ ಸಲ್ಲಿಸಿದರು ಕ್ರಮ ಕೈಗೊಂಡಿಲ್ಲ ಎಂಬ ವಾದವೂ ವ್ಯಕ್ತವಾಗಿದೆ.

ಬಲು ಅಪಾಯಕಾರಿ ಟ್ಯಾಂಕ್: ಪಂಚಾಯಿತಿ ವಠಾರದಲ್ಲಿ ಇರುವ ಎರಡೂ ಟ್ಯಾಂಕ್ ಗಳ ಪೈಕಿ ಸುಮಾರು ಮೂವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಹಳೆಯ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಸಿಮೆಂಟ್ ಕಿತ್ತು ಹೋಗಿ ಅಳವಡಿಸಲಾದ ಸಿಮೆಂಟ್ ರಾಡ್ ಗಳು ತುಕ್ಕು ಹಿಡಿದಿದ್ದು ಜಲ್ಲಿ ಕಲ್ಲುಗಳು ಎದ್ದು ಹೋಗಿವೆ. ಶಿಥಿಲಾವಸ್ಥೆಯ ನೀರಿನ ಟ್ಯಾಂಕ್ ನ ಹತ್ತು ಅಡಿ ಪ್ರದೇಶದಲ್ಲಿ ಪಂಚಾಯತ್ ಕಟ್ಟಡವಿದೆ. ನಿತ್ಯ ನೂರಾರು ಸಾರ್ವಜನಿಕರು ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡುತಿದ್ದಾರೆ. ಹತ್ತು ಅಡಿ ಅಂತರದಲ್ಲೇ ಗ್ರಾಮ‌ಕರಣಿಕರ ಕಚೇರಿ, ರೈತ ಸಂಪರ್ಕ ಕೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ, ಗ್ರಾಮವನ್ ಕೇಂದ್ರ ಬಟ್ಟೆ ಮಳಿಗೆಗಳು, ಟೈಲರ್ ಶಾಪ್ , ಪೋಟೊ ಸ್ಟುಡಿಯೋ ಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಅಂಗಡಿಗಳಲ್ಲಿ ಜನರು ತಮ್ಮ ದೈನಂದಿನ ಬೇಡಿಕೆಗಳಿಗೆ ಬೇಟಿ ನೀಡುತ್ತಾರೆ. ಅದರಲ್ಲೂ ಸರ್ಕಾರಿ ಕಟ್ಟಡ ಗಳು ಇದ್ದು ಅಧಿಕಾರಿಗಳು ಪ್ರಾಣಭಯದಿಂದ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ.

ಜನನಿಬಿಡ ಪ್ರದೇಶ ವಾಗಿರುವ ಈ ನೀರಿನ ಟ್ಯಾಂಕ್ ಬಿದ್ದರೆ ಪ್ರಾಣ ಹಾನಿ ಸಂಭವಿಸಬಹುದಾಗಿದೆ. ಈಗಾಲೂ ಈ ಅಪಾಯಕಾರಿ ನೀರಿನ ಟ್ಯಾಂಕ್ ಗೆ ನೀರನ್ನು ತುಂಬಿಸಿ ಮರ್ಣೆಗ್ರಾಮದ ಒಟ್ಟು 750 ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ವಾಟರ್ ಟ್ಯಾಂಕ್ ತೆರವು ಗೊಳಿಸಲು ಟ್ಯಾಂಕ್ ಸಾಮರ್ಥ್ಯ ದ ಬಗ್ಗೆ ಕಾರ್ಕಳ ನಿಟ್ಟೆಯ ಎನ್ ಎಸ್ ಎಂ ಇಂಜಿನಿಯರಿಂಗ್ ಕಾಲೇಜಿನ ತಜ್ಞರ ತಂಡವು ಅಧ್ಯಯನ ನಡೆಸಿದ್ದು ಈಗಾಗಲೇ ತೆರವು ಗೊಳಿಸಬೇಕು ಎಂದು ಪಂಚಾಯಿತಿಗೆ ವರದಿ ಸಲ್ಲಿಕೆ ಮಾಡಿದೆ. ಗ್ರಾಮ ಸಭೆಯಲ್ಲಿ ಗದ್ದಲ: ಆರು ತಿಂಗಳಿಗೊಮ್ಮೆ ನಡೆಯುವ ಗ್ರಾಮ ಸಭೆಯಲ್ಲಿ ಹಲವು ಬಾರಿ ಈ ಟ್ಯಾಂಕ್ ತೆರವು ಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡರು ಫಲಪ್ರದವಾಗಿಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕವಾಗಿ ತೀವ್ರ ಗದ್ದಲ ಉಂಟಾಗಿತ್ತು. ಆದರೆ ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿಗೆ ಪತ್ರ ಬರೆದರು ತಾಲೂಕು ಪಂಚಾಯಿತಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿದ್ದರು ಹಳೆಯ ಟ್ಯಾಂಕ್ ಇನ್ನೂ ತೆರವಾಗಿಲ್ಲ ಎನ್ನುವುದು ಬೇಸರದ ಸಂಗತಿ ಯಾಗಿದೆ. ಸಾರ್ವಜನಿಕ ರು ಪ್ರಾಣ ಭಯದಿಂದ ಓಡಾಟಬೇಕಾದ ಪರಿಸ್ಥಿತಿ ಒಂದೆಡೆಯಾದರೆ ,ತೆರವು ಗೊಳಿಸದೆ ಹೋದರೆ ಟ್ಯಾಂಕ್ ಬಿದ್ದು ಬದಿಯಲ್ಲಿರುವ ಗ್ರಾಮ ಕರಣಿಕರ ಕಚೇರಿಯ ಕಡತಗಳು ನಾಶವಾಗಬಹುದು. ಪ್ರಾಣಹಾನಿ ಸಂಭವಿಸಿದರೆ ತಾಲೂಕು ಆಡಳಿತವೇ ನೇರ ಹೊಣೆಯಾಗಿದೆ ಎಂದು ಅಜೆಕಾರು ಸಾಮಾಜಿಕ ಕಾರ್ಯಕರ್ತ ಸತೀಶ್ ಅಂಬೇಲ್ಕರ್ ಹೇಳಿದರು.

ವಾಣಿಜ್ಯ ಕಟ್ಟಡಕ್ಕೆ ಭೇಟಿ ನೀಡಲು ತುಂಬಾ ಹೆದರಿಕೆ ಯಾಗುತ್ತಿದೆ‌ ಯಾವ ಸಮಯದಲ್ಲಾದರು ನೀರಿನ ಟ್ಯಾಂಕ್ ಬೀಳಬಹುದು. ಪ್ರಾಣಹಾನಿ ಸಂಭವಿಸಬಹುದು ಎಂದು ಮರ್ಣೆ ಗ್ರಾಮದ ಶ್ವೇತ ಸಾಲಿಯಾನ್ ತಿಳಿಸಿದರು.

ಮರ್ಣೆ ಗ್ರಾಮದ ಹಳೆಯ ಟ್ಯಾಂಕ್ ತೆರವು ಗೊಳಿಸಲು ಯಾವುದೇ ಮನವಿ ನನ್ನ ಗಮನಕ್ಕೆ ಬಂದಿಲ್ಲ. ಆದರೆ ಮನವಿ ಬಂದರೆ ಪರಿಶೀಲಿಸಿ ಸೂಕ್ತ ಕ್ರಮ ಕ್ರಮಕೈಗೊಳ್ಳಲಾಗುವುದು ಎಂದು ಕಾರ್ಕಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡುಗಿ ಹೇಳಿದರು.

ಈಗಾಗಲೇ ಜಲಜೀವನ ಮಿಷನ್ ಅಡಿಯಲ್ಲಿ 50, 000 ಲೀಟರ್ ಸಾಮರ್ಥ್ಯದ ಹೊಸ ಟ್ಯಾಂಕ್ ನಿರ್ಮಾಣಕ್ಕಾಗಿ ಜಾಗವನ್ನು ಗುರುತಿಸಲಾಗಿದೆ. ಹಳೆಯ ಟ್ಯಾಂಕ್ ಕೆಡವಲು ಈಗಾಗಲೇ ತಾಲೂಕು ಪಂಚಾಯಿತಿ ಗೆ ಪತ್ರ ಬರೆಯಲಾಗಿದೆ ಎಂದು ಮರ್ಣೆ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್‌ ತಿಳಿಸಿದರು.

Share this article