ಗ್ರೇಟರ್‌ ಬೆಂಗಳೂರು ಆಡಳಿತತಿದ್ದುಪಡಿ ವಿಧೇಯಕ ಪಾಸ್‌

KannadaprabhaNewsNetwork |  
Published : Aug 20, 2025, 02:00 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪ್ರಕಾರ್ಯಗಳನ್ನು ಕುರಿತು ಸ್ಪಷ್ಟತೆಯನ್ನು ನೀಡುವ ಗ್ರೇಟರ್‌ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ಪ್ರತಿಪಕ್ಷ ಸದಸ್ಯರ ತೀವ್ರ ಆಕ್ಷೇಪ, ಅಸಮಾಧಾನಗಳ ನಡುವೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪ್ರಕಾರ್ಯಗಳನ್ನು ಕುರಿತು ಸ್ಪಷ್ಟತೆಯನ್ನು ನೀಡುವ ಗ್ರೇಟರ್‌ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ಪ್ರತಿಪಕ್ಷ ಸದಸ್ಯರ ತೀವ್ರ ಆಕ್ಷೇಪ, ಅಸಮಾಧಾನಗಳ ನಡುವೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆಯಿತು.

ಈ ಮಧ್ಯೆ, ಪ್ರಾಧಿಕಾರಕ್ಕೆ ‘ಗ್ರೇಟರ್‌’ ಎಂದು ಇಂಗ್ಲೀಷ್‌ ಪದ ಬಳಕೆ ಮಾಡಿರುವುದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು, ನಗರ ಪಾಲಿಕೆಗಳಲ್ಲಿ ಮೇಯರ್‌ ಪ್ರಥಮ ಪ್ರಜೆ. ಆದರೆ, ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅವರನ್ನು ಏಕೆ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಇದು ಸ್ಥಳೀಯ ಸಂಸ್ಥೆಗಳನ್ನು ಸರ್ಕಾರದ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ರಚಿಸಿರುವ ಪ್ರಾಧಿಕಾರ ಎಂದು ಆರೋಪಿಸಿದ ಪ್ರತಿಪಕ್ಷಗಳ ಸದಸ್ಯರು ರದ್ದುಪಡಿಸಬೇಕೆಂದು ಆಗ್ರಹಿಸಿದ ಘಟನೆ ನಡೆಯಿತು. ಇದಕ್ಕೆ ಕೋಪಗೊಂಡ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಪ್ರಾಧಿಕಾರದ ವಿಚಾರದಲ್ಲಿ ನಾನು ಯಾವುದನ್ನೂ ಮುಚ್ಚಿಡಲು ಸಿದ್ಧನಿಲ್ಲ. ಬೆಂಗಳೂರು ಶಾಸಕರೆಲ್ಲರೂ ಹೇಳಲಿ ನಿಮಗೆ ಬೇಡ ಎಂದರೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಕಾಯ್ದೆಯನ್ನೇ ವಾಪಸ್‌ ಪಡೆಯಲು ಸಿದ್ಧ. ಬೇಕಿದ್ದರೆ ಇನ್ನೊಮ್ಮೆ ಸಭೆ ಕರೆಯುತ್ತೇನೆ. ಎಲ್ಲರೂ ತಮ್ಮ ಸಲಹೆ, ಅಭಿಪ್ರಾಯ ಕೊಡಿ ಎಂದರು.

ಇದಕ್ಕು ಮುನ್ನ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ತಿದ್ದುಪಡಿಯ ಉದ್ದೇಶವನ್ನು ವಿವರಿಸಿದರು. ಇದೊಂದು ಸಣ್ಣ ತಿದ್ದುಪಡಿ ಅಷ್ಟೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಹೊಸ ಐದು ನಗರ ಪಾಲಿಕೆಗಳ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ಯಾವುದೇ ಸಂಶಯ ಬೇಡ ಎನ್ನುವ ಕಾರಣಕ್ಕೆ ಸ್ಪಷ್ಟತೆಯನ್ನು ನೀಡುವ ಸಲುವಾಗಿ ಈ ತಿದ್ದುಪಡಿ ತರಲಾಗಿದೆ. ಇದರಿಂದ ನಗರ ಪಾಲಿಕೆಗಳ ನಡುವೆ ಸಮನ್ವಯ ಸಂಸ್ಥೆಯಾಗಿ ಮಾತ್ರ ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ ಎಂದು ಸ್ಪಷ್ಟನೆ ನೀಡಿ ವಿಧೇಯಕ ಅಂಗೀಕರಿಸುವಂತೆ ಕೋರಿದರು. ಸ್ಪೀಕರ್‌ ಧ್ವನಿಮತದ ಮೂಲಕ ಅಂಗೀಕಾರ ಪಡೆದರು. ಪ್ರಾಧಿಕಾರಕ್ಕೆ ಕನ್ನಡ ಪದ ಬಳಸದ್ದಕ್ಕೆ ಅಶೋಕ್‌ ಕಿಡಿವಿಧೇಯಕದ ಪರ್ಯಾಲೋಚನೆ ವೇಳೆ, ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ‘ಗ್ರೇಟರ್‌ ಬೆಂಗಳೂರು ಎಂದು ಇಂಗ್ಲಿಷ್‌ ಹೆಸರಿಡುವ ಅವಶ್ಯಕತೆ ಏನಿತ್ತು. ಸರ್ಕಾರಕ್ಕೆ ಕನ್ನಡ ನಿಘಂಟಿನಲ್ಲಿ ಪದಗಳೇ ಸಿಗಲಿಲ್ವಾ? ಕನ್ನಡ ಮುಗಿಸಲು ಹೊರಟಿದ್ದೀರಾ? ಮಹಾ ಬೆಂಗಳೂರು, ಬೃಹತ್‌ ಬೆಂಗಳೂರು ಸೇರಿದಂತೆ ಕನ್ನಡದ ಪದ ಬಳಕೆ ಮಾಡಬಹುದಿತ್ತಲ್ಲಾ? ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈ ಪ್ರಾಧಿಕಾರದ ಅವಶ್ಯಕತೆಯೇ ಇರಲಿಲ್ಲ. ಇದು ಆಡಳಿತ ವಿಕೇಂದ್ರೀಕರಣದ ಸಂವಿಧಾನದ ಆಶಯಕ್ಕೇ ಕೊಡಲಿ ಪೆಟ್ಟು. ನಗರ ಪಾಲಿಕೆಗಳ ಆಡಳಿತ, ಸ್ವಾತಂತ್ರ್ಯ, ಸ್ವಾವಲಂಭಿ ಆರ್ಥಿಕತೆಯ ಹರಣ. ನಗರ ಪಾಲಿಕೆಗಳನ್ನು ಸರ್ಕಾರದ ಕಪಿಮುಷ್ಟಿಗೆ ಸಿಲುಕಿಸುವ ಹುನ್ನಾರ ಎಂದು ತರಾಟೆಗೆ ತೆಗೆದುಕೊಂಡರು.

ಸದಸ್ಯರಾದ ಮುನಿರಾಜು, ಸತೀಶ್‌ ರೆಡ್ಡಿ ಮತ್ತಿತರರು, ಪ್ರಾಧಿಕಾರವನ್ನು ಯಾಕೆ ತಂದಿದ್ದಾರೆ ಎನ್ನುವ ಬಗ್ಗೆ ಶಾಸಕರಾದ ನಮಗೇ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಬಿಬಿಎಂಪಿಯಲ್ಲಿ ಕಾರ್ಪೊರೇಟರ್ಸ್‌ ಇಲ್ಲ, ಕನಿಷ್ಠ ಶಾಸಕರೊಂದಿಗೂ ಚರ್ಚಿಸದೆ ಬೆಂಗಳೂರನ್ನು ಒಡೆಯಲಾಗಿದೆ. ನಗರದ ಬಿಜೆಪಿ ಶಾಸಕರ ಐದು ವಿಧಾನಸಭಾ ಕ್ಷೇತ್ರಗಳನ್ನು ಎರಡು ನಗರ ಪಾಲಿಕೆಗಳಿಗೆ ಹಂಚಲಾಗಿದೆ. ಬೆಂಗಳೂರನ್ನು ಒಡೆಯಬೇಡಿ ಅಂದರೆ ಕ್ಷೇತ್ರಗಳನ್ನೂ ಒಡೆಯಲಾಗಿದೆ. ಈ ಪ್ರಾಧಿಕಾರ ರಚನೆ ಬಳಿಕ ದಿನ್ನೊಂದು ತೆರಿಗೆ ಬರುತ್ತಿದೆ. ಅಧಿಕಾರಿಗಳು ಬೇಕಾಬಿಟ್ಟಿ ತೆರಿಗೆ ಹೆಚ್ಚಿಸುತ್ತಿದ್ದಾರೆ. ಬೇಕಿದ್ದರೆ ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಈ ಪ್ರಾಧಿಕಾರ ರಚನೆಯಿಂದ ಜನರಿಗೆ ಏನು ಪ್ರಯೋಜನ ಆಗಿದೆ ಎಂದು ಸರ್ವೆ ಮಾಡಿಸಿ ಎಂದು ಸವಾಲು ಹಾಕಿದರು.

ತಿದ್ದುಪಡಿ ಏನು?

ಮೂಲ ಅಧಿನಿಯಮದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪ್ರಕಾರ್ಯಗಳನ್ನು ಕುರಿತು ‘ಪ್ರಾಧಿಕಾರವು ಸರ್ಕಾರವು ನಿರ್ಧರಿಸಿದಂತೆ ಈ ಮುಂದಿನವುಗಳನ್ನು ಒಳಗೊಂಡಂತೆ ನಗರ ಪಾಲಿಕೆಗಳ ಆಡಳಿತಾತ್ಮಕ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು ಮತ್ತು ಅಧಿಕಾರಿಗಳನ್ನು ಚಲಾಯಿಸತಕ್ಕದ್ದು’ ಎಂದು ಹೇಳಲಾಗಿತ್ತು. ಇದು ನಗರ ಪಾಲಿಕೆಗಳ ಆಡಳಿತದಲ್ಲಿ ಸರ್ಕಾರ ನೇರವಾಗಿ ಹಸ್ತಕ್ಷೇಪ ಮಾಡಲು, ಸಂವಿಧಾನಾತ್ಮಕವಾಗಿ ಇರುವ ಅವುಗಳ ಅಧಿಕಾರ, ಆರ್ಥಿಕ ಸ್ವಾತಂತ್ರ್ಯ ಕಸಿಯಲು ಅವಕಾಶ ಮಾಡಿಕೊಡುತ್ತದೆ ಎಂಬ ಆಕ್ಷೇಪ, ಸಂಶಯಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ತಿದ್ದುಪಡಿ ಮೂಲಕ ‘ಪ್ರಾಧಿಕಾರವು ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು’ ಎಂದಷ್ಟೇ ಹೇಳಲಾಗಿದೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ