ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ವಿರೋಧ

KannadaprabhaNewsNetwork |  
Published : Aug 20, 2025, 01:30 AM IST
19ಕೆಪಿಎಲ್ 25ಕೊಪ್ಪಳ ತಾಲೂಕು ಗೊಂಡಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಬಳ್ಳಿ-ಗೊಂಡಬಾಳ ಸೀಮಾ ವ್ಯಾಪ್ತಿಯಲ್ಲಿ ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಮುದ್ದಾಬಳ್ಳಿ ಗ್ರಾಮಸ್ಥರು ಮಂಗಳವಾರ ನಗರದ ಡಿಸಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಎನ್‌ಒಸಿ ಕೊಡುವ ಮೊದಲು ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಪಡೆಯುವಂತೆ ಪಿಡಿಒಗೆ ಮನವಿ ಮಾಡಿದ್ದೇವೆ. ಆದರೆ, ಕಾರ್ಖಾನೆ ಸಂಬಂಧ ಈ ವರೆಗೂ ಗ್ರಾಪಂನಿಂದ ಸಾರ್ವಜನಿಕ ಗ್ರಾಮಸಭೆ ಕರೆದಿಲ್ಲ. ಏಕಾಏಕಿ ಗ್ರಾಪಂ ಸದಸ್ಯರ ಸಭೆ ನಡೆಸಿದ್ದಾರೆ.

ಕೊಪ್ಪಳ:

ಗೊಂಡಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಬಳ್ಳಿ-ಗೊಂಡಬಾಳ ಸೀಮಾ ವ್ಯಾಪ್ತಿಯಲ್ಲಿನ ೬೪ ಎಕರೆ ಜಮೀನಿನಲ್ಲಿ ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದೆ. ಆದರೆ, ಕಾರ್ಖಾನೆ ಸ್ಥಾಪನೆಗೆ ನಮ್ಮ ವಿರೋಧವಿದೆ ಎಂದು ಗ್ರಾಮಸ್ಥರು ಮಂಗಳವಾರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಪಂ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಯುಕೆಇಎಂ ಕಂಪನಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಿದ್ಧತೆ ನಡೆಸಿದ್ದು ನಮ್ಮ ಪ್ರಬಲ ವಿರೋಧವಿದೆ. ಈ ಹಿಂದೆ ಕೊಪ್ಪಳ ಪರಿಸರ ಇಲಾಖೆ ನಡೆಸಿದ ಅಹವಾಲು ಸಭೆಯಲ್ಲಿ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ತಕರಾರು ಅರ್ಜಿ ಸಲ್ಲಿಸಿದ್ದೇವೆ. ಈ ಮಧ್ಯೆ ಕಂಪನಿ ಸರ್ಕಾರದ ವಿವಿಧ ಇಲಾಖೆಯಿಂದ ಅನುಮತಿ ಪಡೆದುಕೊಂಡಿದೆ. ಅಂತಿಮವಾಗಿ ಗೊಂಡಬಾಳ ಗ್ರಾಪಂಗೆ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದೆ. ಅದಕ್ಕೂ ಸಹಿತ ಮೂರು ಗ್ರಾಮಗಳ ಜನರು ತಕರಾರು ವ್ಯಕ್ತಪಡಿಸಿ ೪೦೦ಕ್ಕೂ ಹೆಚ್ಚು ಆಕ್ಷೇಪಣಾ, ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

ಎನ್‌ಒಸಿ ಕೊಡುವ ಮೊದಲು ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಪಡೆಯುವಂತೆ ಪಿಡಿಒಗೆ ಮನವಿ ಮಾಡಿದ್ದೇವೆ. ಆದರೆ, ಕಾರ್ಖಾನೆ ಸಂಬಂಧ ಈ ವರೆಗೂ ಗ್ರಾಪಂನಿಂದ ಸಾರ್ವಜನಿಕ ಗ್ರಾಮಸಭೆ ಕರೆದಿಲ್ಲ. ಏಕಾಏಕಿ ಗ್ರಾಪಂ ಸದಸ್ಯರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸದಸ್ಯ ಪಂಪಾಪತಿ ಹಳ್ಳಿಗುಡಿ ಕಾರ್ಖಾನೆ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಉಳಿದ ಸದಸ್ಯರು ಎನ್‌ಒಸಿ ಕೊಡಲು ಪಿಡಿಒಗೆ ಸೂಚಿಸಿದ್ದಾರೆ. ಇಲ್ಲಿ ಸಾರ್ವಜನಿಕರ ಅಹವಾಲು ಹಾಗೂ ಆಕ್ಷೇಪಣೆಗೆ ಮಾನ್ಯತೆ ಇಲ್ಲದಂತಾಗಿದೆ ಎಂದು ತಾಪಂ ಇಒ ಮುಂದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂಗೆ ಗ್ರಾಮಸ್ಥರ ಹಿತ ಕಾಪಾಡುವುದು ಮುಖ್ಯವಾಗಿದೆ. ಅವರ ಅಹವಾಲು ಆಲಿಸುವುದು ಬಹುಮುಖ್ಯವಾಗಿದೆ. ಆದರೆ, ಅದ್ಯಾವುದು ಇಲ್ಲಿ ಕಾಣಿಸಿಲ್ಲ. ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎನ್‌ಒಸಿ ಕೊಡಬಾರದು, ಕಾರ್ಖಾನೆ ಸ್ಥಾಪಿಸಬಾರದು. ಪಿಡಿಒ ಗ್ರಾಪಂ ಸಭೆಯಲ್ಲಿ ಆಗಿರುವ ಚರ್ಚೆಗಳನ್ನು ಮೇಲಾಧಿಕಾರಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಈ ಕೂಡಲೇ ಜಿಲ್ಲಾಮಟ್ಟದ ಅಧಿಕಾರಿಗಳು ಜನಪರ ನಿಲುವು ತಾಳಬೇಕು. ಒಂದು ವೇಳೆ ಎನ್‌ಒಸಿ ಕೊಟ್ಟಿದ್ದೇ ಆದರೆ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಗ್ರಾಮಸ್ಥರು ಡಿಸಿ ಕಚೇರಿಯಲ್ಲಿ ಜಿಪಂ ಉಪ ಕಾರ್ಯದರ್ಶಿಗೆ ತಿಳಿಸಿದ್ದಾರೆ.

ಈ ವೇಳೆ ಮುದ್ದಾಬಳ್ಳಿಯ ಸುರೇಂದ್ರಗೌಡ ಪಾಟೀಲ್, ವಸಂತರಡ್ಡಿ ಮಾದಿನೂರು, ರಾಜೀವರಡ್ಡಿ ಮಾದಿನೂರು, ಗ್ರಾಪಂ ಸದಸ್ಯ ಪಂಪಾಪತಿ ಹಳ್ಳಿಗುಡಿ, ಪ್ರಕಾಶ ಹಾಲವರ್ತಿ, ರಾಕೇಶಗೌಡ ಪಾಟೀಲ್, ಗವಿಸಿದ್ದನಗೌಡ ಪಾಟೀಲ್, ರಾಜಣ್ಣ ಪಾಟೀಲ್, ಪ್ರಪುಲ್ ಕುಮಾರ, ವಿರೂಪಾಕ್ಷಪ್ಪ ಕುಂಬಾರ, ಬಸವರಾಜ ಹಾಲವರ್ತಿ, ತಿಮ್ಮರಡ್ಡಿ ಬಿಸರಳ್ಳಿ, ಸಣ್ಣಸೈಯದ್ ಸಾಬ್ ಮುಲ್ಲಾ, ಯಂಕಪ್ಪ ಚುಕ್ಕನಕಲ್, ಶರಣಪ್ಪ ಮಾಳೆಕೊಪ್ಪ, ಹನುಮಂತ ಹಟ್ಟಿ, ಮಹೇಶ ಹಿರೇಮಠ, ಯಂಕಪ್ಪ ತಳವಾರ, ಮಲ್ಲಪ್ಪ ಕುಕನೂರು, ಶರಣಪ್ಪ ತಿಮ್ಮಾಪೂರ, ಮಂಜುನಾಥ ಮುದ್ದಿ, ಸದ್ದಾಂ ಹುಸೇನ, ಮಹೇಶ ಹೊಸೂರು, ವಿಶ್ವನಾಥ ಹಳ್ಳಿಗುಡಿ, ಮಹಾಂತೇಶ ಹಡಪದ, ಶಿವಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ