ಸಾವಯವ ಗೊಬ್ಬರ ಬಳಸಲು ರೈತರ ಮನವೊಲಿಸಿ

KannadaprabhaNewsNetwork |  
Published : Aug 20, 2025, 01:30 AM IST
19ಕೆಪಿಎಲ್24 ಕೊಪ್ಪಳ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ನಡೆದ 2025-26ನೇ ತಾ.ಪಂ ಸಾಲಿನ ಸಾಮಾನ್ಯ ಸಭೆ | Kannada Prabha

ಸಾರಾಂಶ

ಮಿತಿಮೀರಿದ ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಆಹಾರ ಸೇವಿಸುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಸಾವಯವ ಗೊಬ್ಬರ ಬಳಕೆಯತ್ತ ರೈತರು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸಲು ಅವರನ್ನು ಗುರುತಿಸಿ ಆದ್ಯತೆ ನೀಡಬೇಕು.

ಕೊಪ್ಪಳ:

ಸಾವಯವ ಗೊಬ್ಬರ ಬಳಕೆಯಿಂದ ಆಗುವ ಅನುಕೂಲಗಳ ಕುರಿತು ರೈತರಿಗೆ ಜಾಗೃತಿ ಮೂಡಿಸಿ ಮನವೊಲಿಸಬೇಕೆಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ ವಿ. ಹೇಳಿದರು. ಮಂಗಳವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ 2025-26ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಿತಿಮೀರಿದ ರಾಸಾಯನಿಕ ಗೊಬ್ಬರ ಬಳಸಿ ಬೆಳೆದ ಆಹಾರ ಸೇವಿಸುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಸಾವಯವ ಗೊಬ್ಬರ ಬಳಕೆಯತ್ತ ರೈತರು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸಲು ಅವರನ್ನು ಗುರುತಿಸಿ ಆದ್ಯತೆ ನೀಡಬೇಕೆಂದು ಕೃಷಿ ಮತ್ತು ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ತೋಟಗಾರಿಕೆ ಬೆಳೆ ಬೆಳೆಯುವ ರೈತರನ್ನು ಸಾವಯವ ಗೊಬ್ಬರದಿಂದ ಆಗುವ ಉಪಯೋಗಗಳ ಕುರಿತು ವ್ಯಾಪಕ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಗ್ರಾಮದಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮೊದಲ ಹಂತದಲ್ಲಿ ಇಲಾಖೆ ವತಿಯಿಂದ ಸೌಲಭ್ಯ ನೀಡುವ ಪೂರ್ವದಲ್ಲಿ ಸಾವಯವ ಗೊಬ್ಬರದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕೆಂದರು.ತೋಟಗಾರಿಕೆ ಬೆಳೆ ಬೆಳೆಯಲು ತಾಲೂಕಿನಲ್ಲಿ ವಿಫುಲ ಅವಕಾಶಗಳಿದ್ದು ಇಲಾಖೆ ವತಿಯಿಂದ ರೈತರಿಗೆ ಅವಶ್ಯವಿರುವ ಬೆಳೆ ಬೆಳೆಯಲು ಅಗತ್ಯ ಸೌಲಭ್ಯ ಕಲ್ಪಿಸಲು ನೆರವಾಗಬೇಕು. ಇದರಿಂದ ರೈತರು ಇಲಾಖೆ ಬಗ್ಗೆ ನಂಬಿಕೆ ಬರುವಂತೆ ಕಾರ್ಯನಿರ್ವಹಿಸಿ. ಇದರಿಂದ ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಲೇಬಗೇರಿ, ಮತ್ತೂರು, ಇಂದರಗಿ, ಹೊಸಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗುತ್ತಿರುವ ಕುರಿತು ಗ್ರಾಮ ಪಂಚಾಯಿತಿಯವರು ಸಭೆಯ ಗಮನಕ್ಕೆ ತಂದರು. ಆಗ ಮಂಗಗಳ ಹಾವಳಿ ತಪ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಅವುಗಳನ್ನು ಹಿಡಿದು ಸುರಕ್ಷಿತ ಪ್ರದೇಶಗಳಿಗೆ ಬಿಡುವಂತೆ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೂಚಿಸಿದರು.

ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ವರದಿ ಮಂಡಿಸಿದರು. ಸಭೆಯಲ್ಲಿ ತಾಪಂ ಇಒ ದುಂಡಪ್ಪ ತುರಾದಿ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ಮಹೇಶ, ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತಾಲೂಕು ಯೋಜನಾಧಿಕಾರಿ ರಾಜೇಸಾಬ್‌ ನದಾಫ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ