ಒಂದು ವಿಭಾಗದ ವ್ಯಾಪ್ತಿಗೆ ಮಂಗಳೂರು ರೈಲ್ವೆ ಪ್ರದೇಶದ ಆಡಳಿತ: ಸಚಿವ ಸೋಮಣ್ಣ ಇಂಗಿತ

KannadaprabhaNewsNetwork | Published : Apr 13, 2025 2:01 AM

ಸಾರಾಂಶ

ದಕ್ಷಿಣ, ನೈಋತ್ಯ ಹಾಗೂ ಕೊಂಕಣ ರೈಲ್ವೆ ಈ ಮೂರು ವಿಭಾಗಗಳನ್ನು ಮಂಗಳೂರು ರೈಲ್ವೆ ಪ್ರದೇಶ ಒಳಗೊಂಡಿದೆ. ಇದರಿಂದಾಗಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ನಿವಾರಿಸಲು ಮಂಗಳೂರು ರೈಲ್ವೆ ಪ್ರದೇಶವನ್ನು ಯಾವುದಾದರೂ ಒಂದು ವಿಭಾಗದ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಆಡಳಿತಾತ್ಮಕ ಅಭಿವೃದ್ಧಿಗಾಗಿ ಮಂಗಳೂರು ರೈಲ್ವೆ ಪ್ರದೇಶವನ್ನು ಒಂದು ವಿಭಾಗದ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಶನಿವಾರ ಮಂಗಳೂರು-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್‌ ರೈಲು ಸುಬ್ರಹ್ಮಣ್ಯ ಮಾರ್ಗ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ದಕ್ಷಿಣ, ನೈಋತ್ಯ ಹಾಗೂ ಕೊಂಕಣ ರೈಲ್ವೆ ಈ ಮೂರು ವಿಭಾಗಗಳನ್ನು ಮಂಗಳೂರು ರೈಲ್ವೆ ಪ್ರದೇಶ ಒಳಗೊಂಡಿದೆ. ಇದರಿಂದಾಗಿ ಆಡಳಿತಾತ್ಮಕ ಹಾಗೂ ಅಭಿವೃದ್ಧಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ನಿವಾರಿಸಲು ಮಂಗಳೂರು ರೈಲ್ವೆ ಪ್ರದೇಶವನ್ನು ಯಾವುದಾದರೂ ಒಂದು ವಿಭಾಗದ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.

ಮುಂಬಯಿ ಸಿಎಸ್‌ಟಿ ಮತ್ತು ಗೊಮಟೇಶ್ವರ ಎಕ್ಸ್‌ಪ್ರೆಸ್‌ ರೈಲುಗಳು ಮಂಗಳೂರು ಜಂಕ್ಷನ್‌ನಿಂದ ಹೊರಡುತ್ತಿವೆ. ಅವುಗಳನ್ನು ಮಂಗಳೂರು ಸೆಂಟ್ರಲ್‌ನಿಂದ ಹೊರಡುವಂತೆ ಮಾಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಫಾಲ್ಘಾಟ್‌ ವಿಭಾಗೀಯ ಅಧಿಕಾರಿಗೆ ಸೂಚಿಸಿದರು.

ಮಂಗಳೂರು ಹೊರತುಪಡಿಸಿದರೆ, ಗೋವಾದಲ್ಲಿ ಮಾತ್ರ ರೈಲ್ವೆ ಪೊಲೀಸ್‌(ಜಿಆರ್‌ಪಿ) ಠಾಣೆ ಇದೆ. ಕೊಂಕಣ ಮಾರ್ಗ ಹಾಗೂ ಮಂಗಳೂರು-ಸಕಲೇಶಪುರ ವರೆಗೆ ರೈಲ್ವೆ ಪೊಲೀಸರ ಯಾವುದೇ ಠಾಣೆಗಳು ಇಲ್ಲ. ಮಂಗಳೂರು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದರಿಂದಾಗಿ ರೈಲು ಸಂಚಾರ ವೇಳೆ ಭದ್ರತೆ ಸೇರಿದಂತೆ ಸೂಕ್ತ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತೊಂದರೆಯಾಗುತ್ತಿರುವ ಅಂಶವನ್ನು ಗಮನಕ್ಕೆ ತಂದಾಗ ಪ್ರತಿಕ್ರಿಯಿಸಿದ ಸಚಿವರು, ಈ ನಿಟ್ಟಿನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

------------------

ಜಾತಿ ಗಣತಿ ವರದಿ ತಿರಸ್ಕರಿಸಿ ಹೊಸದಾಗಿ ಗಣತಿ ನಡೆಸಿ: ಸಿಎಂಗೆ ಸಿದ್ದುಗೆ ಸಚಿವ ಸೋಮಣ್ಣ

ಕನ್ನಡಪ್ರಭ ವಾರ್ತೆ ಮಂಗಳೂರುಜಾತಿಗಣತಿ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಒಂದುವರೆ ವರ್ಷದಲ್ಲಿ ಹೊಸದಾಗಿ ಜಾತಿಗಣತಿ ಮಾಡಿಸಿ ಅದನ್ನು ಹೊರಗೆ ತರಿಸಲಿ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮಂಗಳೂರಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಸಿಎಂ ಅವರು ತಮ್ಮ ಕುರ್ಚಿಯನ್ನು ಉಳಿಸಲು, ಜಾತಿ ಗಣತಿ ವರದಿ ಜಾರಿ ಮೂಲಕ ಗೊಂದಲ ಸೃಷ್ಠಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ದೇವರಾಜು ಅರಸುಗಿಂತ ದೊಡ್ಡವರಲ್ಲ. ಈಗಿನ ಜಾತಿಗಣತಿ ವರದಿ ಮಕ್ಕಿಕಾಮಕ್ಕಿ ಮಕ್ಮಲ್‌ಟೋಪಿ ಎಲ್ಲವೂ ಅವರಿಗೆ ಬೇಕಾದಂತೆ ವರದಿಯನ್ನು ರೂಪಿಸಲಾಗಿದೆ. ಇದು ಜಾರಿಯಾದರೆ, ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ ಎಂದರು.ಜಾತಿ ಗಣತಿ ವರದಿಯನ್ನು ಜಾರಿಗೊಳಿಸುವ ಅವಶ್ಯಕತೆ ಇರಲಿಲ್ಲ, ಯಾವ ಉದ್ದೇಶಕ್ಕಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆಯೋ ಗೊತ್ತತ್ತಿಲ್ಲ ಎಂದು ಬಹುತೇಕ ಅವರದೇ ಸಚಿವರು ಹೇಳುತ್ತಿದ್ದಾರೆ. ಭ್ರಷ್ಟ ವ್ಯವಸ್ಥೆಯನ್ನು ರೂಪಿಸಿ, ನಾನು ಭಾರಿ ಒಳ್ಳೆಯವನು ಎಂದು ನಿಮಗೆ ನೀವೇ ಹೇಳಿಕೊಳ್ಳುತ್ತಿದ್ದೀರಿ. ಇನ್ನೊಂದು ಕಡೆ ಅದಕ್ಕೆ ಅಪಚಾರವಾಗುವಂತಹ ತೀರ್ಮಾನ ಕೈಗೊಳ್ಳುತ್ತಿದ್ದೀರಿ. ಜನರನ್ನು ತುಂಬ ದಿನ ಮೋಸ ಮಾಡಲು ಆಗುವುದಿಲ್ಲ. ಇಂತಹ ತಪ್ಪು ಮಾಡಿ ನಾಲ್ಕು ಜನರ ಮುಂದೆ ಖಳ ನಾಯಕರಾಗಬೇಡಿ ಎಂದರು.ಶಾಸಕ ಬಸವಗೌಡ ಯತ್ನಾಳ್ ಅವರಿಗೆ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಅದಕ್ಕಿಂತ ಪಾಪದ ಕೆಲಸ ಇನ್ನೊಂದಿಲ್ಲ. ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

Share this article