ಆಗಸ್ಟ್‌ನೊಳಗೆ ಸೀ ಆ್ಯಂಬುಲೆನ್ಸ್‌ ವ್ಯವಸ್ಥೆ: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Apr 13, 2025, 02:01 AM IST
ಸಚಿವ ಮಾಂಕಾಳ ವೈದ್ಯ | Kannada Prabha

ಸಾರಾಂಶ

ಮೀನುಗಾರಿಕಾ ಬಂದರಿನ ಮುಖ್ಯದ್ವಾರದ ಬಳಿ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ‘ಬಹರ್‌- ಎ- ನೂರ್‌’ ನೂತನ ಕಟ್ಟಡದಲ್ಲಿ ಶನಿವಾರ ಮಂಜುಗಡ್ಡೆ ಸ್ಥಾವರ ಉದ್ಘಾಟನೆ ನಡೆಯಿತು.

‘ಬಹರ್‌- ಎ- ನೂರ್‌’ ನೂತನ ಕಟ್ಟಡದ ಮಂಜುಗಡ್ಡೆ ಸ್ಥಾವರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮಂಗಳೂರು

ಬಹು ಸಮಯದ ಬೇಡಿಕೆಯಂತೆ ಕಡಲ ನಡುವೆ ಮೀನುಗಾರರು ತುರ್ತು ಅವಘಡ, ಅನಾರೋಗ್ಯ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಸಹಕಾರಿಯಾಗುವಂತೆ ಸೀ ಆ್ಯಂಬುಲೆನ್ಸ್‌ ವ್ಯವಸ್ಥೆಗೆ ಈಗಾಗಲೇ ಟೆಂಡರ್‌ ಕರೆಯಲಾಗುತ್ತಿದ್ದು, ಆಗಸ್ಟ್‌ನೊಳಗೆ ಕಾರ್ಯಗತಗೊಳ್ಳಬಹುದು ಎಂದು ರಾಜ್ಯ ಮೀನುಗಾರಿಕಾ ಸಚಿವ ಮಂಕಾಳ ಎಸ್‌. ವೈದ್ಯ ಹೇಳಿದ್ದಾರೆ.

ಇಲ್ಲಿನ ಮೀನುಗಾರಿಕಾ ಬಂದರಿನ ಮುಖ್ಯದ್ವಾರದ ಬಳಿ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ‘ಬಹರ್‌- ಎ- ನೂರ್‌’ ನೂತನ ಕಟ್ಟಡದಲ್ಲಿ ಶನಿವಾರ ಮಂಜುಗಡ್ಡೆ ಸ್ಥಾವರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್‌ ಕುಮಾರ್‌ ಕೆ. ಮಾತನಾಡಿ, ನೂತನ ಕಟ್ಟಡದಲ್ಲಿ ಆರಂಭಗೊಂಡಿರುವ ಮಂಜುಗಡ್ಡೆ ಸ್ಥಾವರಕ್ಕೆ ಮತ್ಸ್ಯ ಸಂಪದ ಯೋಜನೆಯಡಿ ಯಾವ ರೀತಿ ಸಹಕಾರ ಒದಗಿಸಲಾಗುವುದು ಎಂಬ ಬಗ್ಗೆ ಪರಿಶೀಲಿಸಲಾಗುವುದು. ಧಕ್ಕೆಯಲ್ಲಿ ಮೂರನೇ ಹಂತದ ಕಾಮಗಾರಿ ಹಾಗೂ ಇತರ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಸಾಗರಮಾಲಾ ಯೋಜನೆಯಡಿ ಮಂಗಳೂರು ಧಕ್ಕೆಯ ಮೈನಸ್‌ 7 ಮೀಟರ್‌ ಡ್ರೆಜ್ಜಿಂಗ್‌ಗೆ 9 ಬಾರಿ ಟೆಂಡರ್‌ ಕರೆಯಲಾಗಿದೆ. ಮೂರನೇ ಹಂತದ ಧಕ್ಕೆ ಅಭಿವೃದ್ಧಿ ಕಾಮಗಾರಿ ಮಂಜೂರುಗೊಂಡು ಎರಡು ವರ್ಷಗಳಾದರೂ ಕಾಮಗಾರಿ ಆರಂಭವಾಗಿಲ್ಲ ಎಂದರು.

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಜೆ. ಮುಹಮ್ಮದ್‌ ಇಸಾಕ್‌ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ವಿಪಕ್ಷದ ಮಾಜಿ ನಾಯಕ ಅಬ್ದುಲ್‌ ರವೂಫ್‌, ಮಾಜಿ ಸದಸ್ಯರಾದ ಸಂಶುದ್ದೀನ್‌, ಸಿಎ ಪ್ರವೀಣ್‌ ಕುಮಾರ್‌ ಶೆಟ್ಟಿ, ವಕೀಲ ಉದಯಾನಂದ, ಟ್ರಾಲ್‌ಬೋಟ್‌ ಯೂನಿಯನ್‌ ಅಧ್ಯಕ್ಷ ಚೇತನ್‌ ಬೆಂಗ್ರೆ, ಪರ್ಸಿನ್‌ ಬೋಟ್‌ ಯೂನಿಯನ್‌ ಅಧ್ಯಕ್ಷ ಅನಿಲ್‌ ಕುಮಾರ್‌ ಮತ್ತಿತರರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್‌ ಲತೀಫ್‌ ಸ್ವಾಗತಿಸಿದರು. ಸಲಹೆಗಾರ ಮಲಾರ್‌ ಮುಹಮ್ಮದ್‌ ಮುಸ್ತಫ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ ನಿರೂಪಿಸಿದರು.

-------------------ಕರಾವಳಿಗೆ ಸಮಗ್ರ ಮೀನುಗಾರಿಕಾ ನೀತಿ ಅಗತ್ಯ

ಕರ್ನಾಟಕದ ಕರಾವಳಿಯಲ್ಲಿ ಸಮಗ್ರ ಮೀನುಗಾರಿಕಾ ನೀತಿಯನ್ನು ರೂಪಿಸಬೇಕಾಗಿದೆ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

ಬಹರ್‌ - ಎ- ನೂರ್‌ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಮೂಲಕ ಭವಿಷ್ಯದಲ್ಲಿ ಕರಾವಳಿ ಪ್ರದೇಶದ ಭವಿಷ್ಯದ ಮೀನುಗಾರರಿಗೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಇಂದು ಕಡಲು ನೋಡದವರು ಕೂಡಾ ಬೋಟುಗಳನ್ನು ಹೊಂದಿದ್ದಾರೆ. ಆದರೆ ಉತ್ತಮ ಮೀನುಗಾರಿಕೆಯ ಜತೆಗೆ ನಮ್ಮ ಜಲ ಮತ್ತು ಜಲ ಕೃಷಿಯನ್ನು ಸಂರಕ್ಷಿಸುವ ಜವಾಬ್ಧಾರಿಯೂ ಮೀನುಗಾರರದ್ದಾಗಬೇಕು. ಮರಿ ಮೀನು ಹಿಡಿಯುವಂತಹ ಪ್ರಕ್ರಿಯೆಗಳಿಗೆ ಕಡಿವಾಣ ಹಾಕುವ ಕೆಲಸವೂ ಮೀನುಗಾರರು ಮಾಡುವ ಮೂಲಕ ನಮ್ಮ ಮೀನಿನ ಸಂಪತ್ತನ್ನು ಮುಂದಿನ ಜನಾಂಗಕ್ಕೂ ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ರೂಪುರೇಷೆಗಳನ್ನು ಮೀನುಗಾರಿಕಾ ಸಂಘಟನೆಗಳ ಮೂಲಕ ಮಾಡಬೇಕು. 200 ಕೋಟಿ ರು. ವೆಚ್ಚದಲ್ಲಿ ಬೋಳಾರ ಹಾಗೂ ಕೋಟೆಪುರ ನಡುವೆ ಮೀನುಗಾರಿಕಾ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ ಎಂದರು.

-----------------

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...