ಬೆಂಗಳೂರು: ದೇಶದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಬೆನ್ನೆಲುಬಾಗಿ ನಿಲ್ಲಲು ಸರ್ಕಾರ ಸಹಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ ಹೇಳಿದರು.
ಮಂಗಳವಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ(ಎಫ್‌ವಿಸಿಕೆ) ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ದಕ್ಷ ಮತ್ತು ಪರಿಣಾಮಕಾರಿ ಆಡಳಿತ ನೀಡುವುದಕ್ಕಾಗಿ ಕುಲಪತಿಗಳ ಬಲವರ್ಧನೆ’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ನೀತಿಗಳು ಬದಾಲಾವಣೆಯಾದರೂ ಈ ಕ್ಷೇತ್ರದಲ್ಲಿ ಸಮಸ್ಯೆಗಳು ತಪ್ಪಿದಲ್ಲ. ಯಾವುದೇ ಸರ್ಕಾರ ಬಂದರೂ ತಮ್ಮ ಅನೂಕುಲಕ್ಕಾಗಿ ಹೊಸ-ಹೊಸ ನೀತಿ- ನಿಯಮಗಳನ್ನು ಜಾರಿ ಮಾಡುತ್ತವೇ. ಆದರೆ ಈ ನಿಯಮಗಳಿಂದ ಶಿಕ್ಷಣ, ವಿದ್ಯಾರ್ಥಿ ಹಾಗೂ ಶಿಕ್ಷಕರ ಮೇಲೆ ಆಗುವ ಪರಿಣಾಮಗಳ ಕುರಿತು ಯೋಚಿಸಲಾರವು ಎಂದು ಬೇಸರ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಧಿಕಗೊಂಡಿದೆ. ವಿವಿಗಳಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಇವುಗಳ ಶಿಕ್ಷಣ ಗುಣಮಟ್ಟ ಉತ್ತಮಗೊಳ್ಳಬೇಕೆಂದರೆ ಪ್ರತಿ ಶಿಕ್ಷಣ ಸಂಸ್ಥೆ ಮತ್ತು ವಿವಿಗಳು ಆಂತರಿಕ ಮೌಲ್ಯಮಾಪನಕ್ಕೆ ಪ್ರಥಮ ಆದ್ಯತೆ ನೀಡಬೇಕು. ಇದು ನಿರಂತರ ನಡೆಯಬೇಕಾದ ಪ್ರಕ್ರಿಯೆ. ಪ್ರತಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆ ಗುಣಮಟ್ಟ, ಶಿಕ್ಷಕರ ಜ್ಞಾನಾರ್ಜನೆ ಮಟ್ಟ ಹಾಗೂ ಸಂಶೋಧನೆಗೆ ಸಿಗುತ್ತಿರುವ ಉತ್ತೇಜನವನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಹಾಗೂ ಆಂತರಿಕವಾಗಿ ಪ್ರತಿ ಶಿಕ್ಷಣ ಸಂಸ್ಥೆ ಗುಣಮಟ್ಟ ಉತ್ತಮಪಡಿಸಲು ಕ್ರಮ ಕೈಗೊಂಡಲ್ಲಿ ಜಾಗತಿಕ ಮಟ್ಟದಲ್ಲಿ ದೇಶದ ಶಿಕ್ಷಣ ಪದ್ಧತಿಗೆ ಮನ್ನಣೆ ಸಿಗಲಿದೆ ಎಂದು ಹೇಳಿದರು.ಹಿಂದೆ ಗುರುಕುಲ ಪದ್ಧತಿ ನಮ್ಮಲ್ಲಿತ್ತು. ತಕ್ಷಶಿಲಾದಿಂದ ಹಿಡಿದು ನಾಗಾವಿವರೆಗೆ ಅಂತಾರಾಷ್ಟ್ರೀಯ ಮಟ್ಟದ ವಿವಿಗಳಿದ್ದವು. ಅಂದಿನ ಶಿಕ್ಷಣ ಮಟ್ಟವನ್ನು ಮತ್ತೆ ಗಳಿಸಬೇಕು. ಅದಕ್ಕೆ ಹಿಂದಿನ ಸಾಮಾಜಿಕ ಬದ್ಧತೆ ಮತ್ತು ಶ್ರದ್ಧೆ ಉಳಿಸಿಕೊಳ್ಳಬೇಕು.ಅದರೊಂದಿಗೆ ಅಧುನಿಕ ಶಿಕ್ಷಣ ಪದ್ಧತಿಗೆ ಆದ್ಯತೆ ನೀಡುವುದರಿಂದ ಜಾಗತಿಕ ಮಟ್ಟದಲ್ಲಿ ದೇಶದ ವಿವಿಗಳಿಗೆ ಮನ್ನಣೆ ಸಿಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಡಾ.ಎಸ್. ಚಂದ್ರಶೇಖರ್ ಶೆಟ್ಟಿ, ಎಫ್‌ವಿಸಿಕೆ ಶೈಕ್ಷಣಿಕ ಸಮಿತಿ ಅಧ್ಯಕ್ಷ ಡಾ.ಕೆ.ನಾರಾಯಣಗೌಡ, ಕೆಎಸ್‌ಎಚ್‌ಇಸಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಜಿ.ಚಂದ್ರಶೇಖರ್, ಎಫ್‌ವಿಸಿಕೆ ಕಾರ್ಯದರ್ಶಿ ಡಾ.ಎಚ್.ಮಹೇಶಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.