ಕನ್ನಡಪ್ರಭ ವಾರ್ತೆ ಬ್ಯಾಡಗಿ
ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ (ಮುಖ್ಯರಸ್ತೆ) ಅಗಲೀಕರಣ ವಿಳಂಬ ನೀತಿ ಖಂಡಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಪಟ್ಟಣದ ಹಳೇ ಪುರಸಭೆ ಎದುರು ಮಂಗಳವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು.ಈ ವೇಳೆ ಮಾತನಾಡಿದ ಮುಖ್ಯರಸ್ತೆ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ಸಾರ್ವ ಜನಿಕರ ಹಿತ ದೃಷ್ಟಿಯಿಂದ ಪಟ್ಟಣದಲ್ಲಿನ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಕಳೆದ 14 ವರ್ಷಗಳಿಂದ ಬ್ಯಾಡಗಿ ಬಂದ್, ಕತ್ತೆ ಮೆರವಣಿಗೆ, ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಹೋರಾಟ ಮಾಡಿದ್ದೇವೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಅಗಲೀಕರಣ ಇಲ್ಲಿಯವರೆಗೂ ಗಗನ ಕುಸುಮವಾಗಿ ಉಳಿದಿದೆ. ಈಗಾಗಲೇ ಕಿರಿದಾದ ರಸ್ತೆಯಲ್ಲಿ ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದರೂ ಸಹ ಅಧಿಕಾರಿಗಳಿಗೆ ಬುದ್ಧಿ ಬಂದಿಲ್ಲ ಎಂದು ಆರೋಪಿಸಿದರು.
ಸಮಿತಿ ಮುಖಂಡ ಕಿರಣಕುಮಾರ ಎಂ.ಎಲ್. ಮಾತನಾಡಿ, ಈಗಾಗಲೇ ಅಧಿಕಾರಿಗಳು ಮಾಡಿದ ತಪ್ಪಿನಿಂದ ಒಂದು ಬಾರಿ ಅಗಲೀಕರಣದ ಸಲುವಾಗಿ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಆದಂತಹ ನೋಟಿಫಿಕೇಷನ್ (ರಾಜ್ಯಪತ್ರ) ಹೈಕೋರ್ಟ್ ಧಾರವಾಡ ಪೀಠದಿಂದ ರದ್ದಾಗಿರುತ್ತದೆ. ಈಗ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿ ಪ್ರಿಲಿಮಿನರಿ ನೋಟಿಫಿಕೇಷನ್ ಹೊರಡಿಸಿ ಬಹಳ ದಿನಗಳು ಕಳೆದರೂ ಸಹಾ ಅಧಿಕಾರಿಗಳು ಒಂದಿಲ್ಲೊಂದು ರೀತಿಯಿಂದ ಪ್ರಕ್ರಿಯೆಯನ್ನು ಮುಂದೂಡುತ್ತಾ ಹೊರಟಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಷಡ್ಯಂತ್ರ ನಡೆಸುತ್ತಿವೆ ಎಂದು ದೂರಿದರು.ಸಮಿತಿ ಸದಸ್ಯ ಪಾಂಡುರಂಗ ಸುತಾರ ಮಾತನಾಡಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅಗಲೀಕರಣಕ್ಕೆ ಹಿನ್ನಡೆಯಾಗಿದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸಹ ರಸ್ತೆ ಅಗಲೀಕರಣ ಮಾಡಬೇಡಿ ಎಂದು ಕೋರ್ಟ್ ಎಲ್ಲೂ ಹೇಳಿಲ್ಲ. ನನೆಗುದಿಗೆ ಬಿದ್ದಿರುವ ರಸ್ತೆ ಅಗಲೀಕರಣದಿಂದ ಪಟ್ಟಣ ಕುಗ್ರಾಮಕ್ಕಿಂತಲೂ ಕಡೆಯಾಗಿದೆ ಎಂದರು.
ರೈತ ಮುಖಂಡ ಕೆ.ವಿ. ದೊಡ್ಡಗೌಡರ ಮಾತನಾಡಿ, ಮುಖ್ಯರಸ್ತೆಯಲ್ಲಿ ಶಿಥಿಲಗೊಂಡಿರುವ ಕಟ್ಟಡ ತೆರವುಗೊಳಿಸುವಂತೆ ಪುರಸಭೆಗೆ ಮನವಿ ಸಲ್ಲಿಸಿ ವರ್ಷಗಳೆ ಕಳೆದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವೇ ಕೆಲವು ಜನರ ಹಿತರಕ್ಷಣೆಗಾಗಿ ಬದ್ಧರಾಗಿ ಕುಳಿತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಲಕ್ಷಾಂತರ ಜನರ ಬೇಡಿಕೆಯನ್ನ ಈಡೇರಿಸದೆ ಉದ್ಧಟತನ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘ ಬೆಂಬಲ:
ಮುಖ್ಯರಸ್ತೆ ಅಗಲೀಕರಣ ಹೋರಾಟಕ್ಕೆ ತಾಲೂಕಾ ನ್ಯಾಯವಾದಿಗಳ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಹಲವು ಸಂಘದ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಹೋರಾಟದ ವಿಷಯ ತಿಳಿದಿದ್ದರೂ ಸಹ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಹೀಗಾಗಿ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿತು.