ಟಿಎಸ್ಎಸ್‌ಗೆ ಕಾನೂನುಬಾಹಿರವಾಗಿ ಆಡಳಿತಾಧಿಕಾರಿ ನೇಮಕ: ಉಪನಿಬಂಧಕರ ಅಮಾನತು

KannadaprabhaNewsNetwork | Published : May 30, 2024 12:52 AM
Follow Us

ಸಾರಾಂಶ

ನಿಯಮಗಳನ್ನು ಪಾಲಿಸದೆ ಇರುವುದರಿಂದ ಮತ್ತು ಟಿಎಸ್ಎಸ್‌ನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣರಾಗಿದ್ದು ಅಲ್ಲದೇ ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಮಂಜುನಾಥ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

ಕಾರವಾರ: ಶಿರಸಿಯ ದಿ. ತೋಟಗಾರ್ಸ್‌ ಸೇಲ್ಸ್ ಸೊಸೈಟಿ ಆಡಳಿತ ಮಂಡಳಿ ವಜಾ ಮಾಡಿ ಆಡಳಿತಾಧಿಕಾರಿಯನ್ನು ಕಾನೂನುಬಾಹಿರವಾಗಿ ನೇಮಕ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಸಹಕಾರಿ ಸಂಘಗಳ ಉಪನಿಬಂಧಕ ಮಂಜುನಾಥ ಸಿಂಗ್ ಎಸ್.ಜಿ‌. ಅವರನ್ನು ಕರ್ತವ್ಯಲೋಪದ ಹಿನ್ನೆಲೆ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ.ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬುಧವಾರ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಶಿರಸಿಯ ಟಿಎಸ್ಎಸ್ ಆಡಳಿತ ಮಂಡಳಿಗೆ 2023ರ ಆ. 20ರಂದು ಚುನಾವಣೆ ನಡೆದಿತ್ತು. ಆಯ್ಕೆಯಾದ ನಿರ್ದೇಶಕರ ಪಟ್ಟಿಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿ, ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡಿತ್ತು.ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಪದೋಷವಾಗಿದೆ ಎಂದು ಸಂಘದ ಸದಸ್ಯರಾದ ಗಣಪತಿ ರಾಯ್ಸದ ಮತ್ತು ವಿನಾಯಕ ಭಟ್ ಇವರು ಚುನಾವಣಾ ದಾವಾ ಅರ್ಜಿ ದಾಖಲಿಸಿದ್ದರು.ಈ ದಾವಾ ಅರ್ಜಿಗೆ ಸಂಬಂಧಿಸಿ ಸಹಕಾರಿ ಸಂಘಗಳ ಉಪನಿಬಂಧಕರು ಮೇ 24ರಂದು ಅಂತಿಮ ಆದೇಶ ಹೊರಡಿಸಿದ್ದರಾದರೂ, ಇವರು ಕಚೇರಿ ಕರ್ತವ್ಯಕ್ಕೆ ಹಾಜರಾಗದೆ ಅಜ್ಞಾತ ಸ್ಥಳದಿಂದ ಅಂತಿಮ ಆದೇಶ ಹೊರಡಿಸಿದ್ದರ ಬಗ್ಗೆ ದೂರುಗಳು ಕೇಳಿ ಬಂದಿದ್ದವು.

ಸಹಕಾರ ಸಂಘಗಳ ಉಪನಿಬಂಧಕರು ಚುನಾವಣಾ ಫಲಿತಾಂಶ ರದ್ದುಪಡಿಸಿ ವಿಶೇಷಾಧಿಕಾರಿಯನ್ನು ನೇಮಕ ಮಾಡಿದ್ದರು.ಇಂತಹ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರದೆ ಹಾಗೂ ಇಲಾಖೆಯ ಮೇಲಧಿಕಾರಿಯ ಅನುಮತಿ ಪಡೆಯದೆ, ಕೇಂದ್ರ ಸ್ಥಾನದಿಂದ ಹೊರಗಿದ್ದು ಆದೇಶ ಹೊರಡಿಸಿದ್ದರ ಕುರಿತು ಉಪನಿಬಂಧಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.ನಿಯಮಗಳನ್ನು ಪಾಲಿಸದೆ ಇರುವುದರಿಂದ ಮತ್ತು ಟಿಎಸ್ಎಸ್‌ನಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡಲು ಕಾರಣರಾಗಿದ್ದು ಅಲ್ಲದೇ ಜವಾಬ್ದಾರಿಯುತ ಅಧಿಕಾರಿಯಾಗಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಮಂಜುನಾಥ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

ಈ ಮಧ್ಯೆ ಸೋಮವಾರ ಬೆಳಗಾವಿಯ ಸಹಕಾರ ಸಂಘಗಳ ಜಂಟಿ ನಿಬಂಧಕರು, ಉಪ ನಿಬಂಧಕರ ಆದೇಶಕ್ಕೆ ತಡೆಯಾಜ್ಞೆ ನೀಡಿ ಆಡಳಿತಾಧಿಕಾರಿ ನೇಮಕ ರದ್ದು ಪಡಿಸಿ ಚುನಾಯಿತ ಮಂಡಳಿಗೆ ಅಧಿಕಾರ ನೀಡಿದ್ದರು. ಮಂಗಳವಾರ ಚುನಾಯಿತ ಮಂಡಳಿ ಮತ್ತೆ ಅಧಿಕಾರ ಸ್ವೀಕರಿಸಿತ್ತು.