ಕನ್ನಡಪ್ರಭ ವಾರ್ತೆ ಬೀಳಗಿ
ಕಾಯಕದ ಸಂಸ್ಕೃತಿಯ ಮೇಲೆ ಜಾತಿಗಳು ಗುರುತಿಸಿಕೊಂಡಿದ್ದವು. ಜಾತಿಗಳಲ್ಲಿ ಮೇಲಿಲ್ಲ ಕೀಳಿಲ್ಲ. ಅದು ಬದುಕಿನ ಪರ್ಯಾಯ ವ್ಯವಸ್ಥೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ನುಡಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರ ಜಯಂತಿ ಉತ್ಸವ-೨೦೨೬ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಗುಣವನ್ನು ಶಾಸಕರಾದ ಜೆ.ಟಿ.ಪಾಟೀಲ ಅವರಲ್ಲಿ ಕಾಣಬಹುದು. ಸಿದ್ದರಾಮೇಶ್ವರು ಕಾಯಕ ವರ್ಗದ ಅಸ್ಮಿತೆ, ಸತ್ಯ, ಶುದ್ಧ ಕಾಯಕ ಮಾಡುವ ಸಮಾನತೆ ಹರಿಕಾರರು, ವೈಜ್ಞಾನಿಕ ,ವೈಚಾರಿಕ ಪ್ರಜ್ಞಾ ಪುರುಷರು. ಮಾನಸಿಕ ಅಸ್ಪ್ರಶ್ಯತೆ ಎಲ್ಲಿಯವರೆಗೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಜಾತಿ ವ್ಯವಸ್ಥೆ ಹೋಗುವುದಿಲ್ಲ ಹಾಗಾಗಿ ಅಕ್ಷರ, ಆರ್ಥಿಕ, ಆಧ್ಯಾತ್ಮಿಕವಾಗಿ ಕ್ರಾಂತಿ ಮಾಡಬೇಕು ಎಂದು ತಿಳಿಸಿದರು.ಶಾಸಕ ಜೆ.ಟಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಸಮಾಜ ನಿರ್ಮಾಣಕ್ಕಾಗಿ ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕಾರ್ಯಗಳು ಇಂದಿಗೂ ಎಲ್ಲರಿಗೂ ಮನಮುಟ್ಟುವಂತೆ ಮಾಡಿದೆ. ಅಂತಹ ಅನುಭವ ಮಂಟಪದಿಂದ ಸಿದ್ದರಾಮೇಶ್ವರರು ಸಾಕಷ್ಟು ವಚನಗಳನ್ನು ನೀಡಿ ಸಮಾಜಗಳ ಸುಧಾರಣೆಗೆ ಶ್ರಮಿಸಿದ್ದರು. ಆದರೆ, ಇಂದಿನ ದಿನಗಳಲ್ಲಿ ಜಾತಿ ವ್ಯವಸ್ಥೆಗೆ ಅಂಟಿಕೊಂಡು ನಮ್ಮ ಕಾರ್ಯಗಳನ್ನು ಮಾಡುತ್ತೇವೆ. ಎಲ್ಲರಲ್ಲಿಯೂ ಸಮಾನತೆಯ ಅರಿವು ಬರಬೇಕು. ಶರಣರು, ಹಿರಿಯರು ಹೇಳಿದ ಮಾತಿನಂತೆ ನಾವು ನಡೆಯುವುದು ಬಿಟ್ಟಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಉಪನ್ಯಾಸಕ ಅರವಿಂದ ವಡ್ಡರ ಮಾತನಾಡಿದರು. ಬೀಳಗಿ ಹುಚ್ಚಪ್ಪಯ್ಯನ ಮಠದಫಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ತಹಸೀಲ್ದಾರ್ ವಿನೋದ್ ಹತ್ತಳ್ಳಿ, ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ, ತಾಪಂ ಇಒ ಶ್ರೀನಿವಾಸ ಪಾಟೀಲ್, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್ ಸೇರಿದಂತೆ ಇತರರು ಇದ್ದರು. ಪಟ್ಟಣದ ಹುಚ್ಚಪ್ಪಯ್ಯ ಕಟ್ಟೆಯಿಂದ ವಿವಿಧ ವೃತ್ತಗಳ ಮೂಲಕ ಸಕಲ ವಾದ್ಯ ವೈಭವಗಳೊಂದಿಗೆ ಸಿದ್ದರಾಮೇಶ್ವರ ಭಾವಚಿತ್ರದೊಂದಿಗೆ ಸಾವಿರಾರು ಮಹಿಳೆಯ ಕುಂಭ, ಆರತಿ ಸಾರೋಟ ರಥದಲ್ಲಿ ಇಮ್ಮಡಿ ಶ್ರೀಗಳು ಮತ್ತು ಹುಚ್ಚಪ್ಪಯ್ಯಮಠದ ಶ್ರೀಗಳು ಭವ್ಯ ಮೆರವಣಿಗೆ ನಡೆಯಿತು.ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಹೆಚ್ಚಿನ ಕಾಳಜಿವಹಿಸಿ. ಬೀಳಗಿ ಪಟ್ಟಣದಲ್ಲಿ ಕೆಪಿಎಸ್ಸಿ ಶಾಲೆ ಮಂಜೂರಾಗಿದ್ದು, ಎಸ್ಸಿಪಿ ಟಿಎಸ್ಪಿ ಯೋಜನೆಯಲ್ಲಿ ₹೫೩ ಲಕ್ಷ ವೆಚ್ಚದಲ್ಲಿ ಸೋಲಾರ್ ಲ್ಯಾಂಪ್ ವಿತರಣೆ ಮಾಡಲಾಗುವುದು.
-ಜೆ.ಟಿ.ಪಾಟೀಲ, ಶಾಸಕರು.