ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ಅಬ್ಬರ ಇನ್ನಷ್ಟು ಹೆಚ್ಚಾಗುತ್ತಿದ್ದು, 12 ಜಿಲ್ಲೆಯಲ್ಲಿ ನಾಲ್ಕು ದಿನ ಬಿಸಿ ಗಾಳಿಯಿಂದಾಗಿ ತಾಪಮಾನ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಏ.15ರಿಂದ ಉತ್ತರ ಒಳನಾಡಿನಲ್ಲಿ ಬಿಸಿಗಾಳಿ

ಏ.15ರಿಂದ ಉತ್ತರ ಒಳನಾಡಿನಲ್ಲಿ ಬಿಸಿಗಾಳಿ ಹೆಚ್ಚಾಗಿದ್ದು, ಏ.19 ವರೆಗೂ ಮುಂದುವರೆಯಲಿದೆ. ಮಧ್ಯ ಭಾರತದಲ್ಲಿ ವಾಯುವಿನ ಅಧಿಕ ಒತ್ತಡ, ಜಾಗತಿಕ ಮಟ್ಟದಲ್ಲಿ ಉಷ್ಣತೆ ಹೆಚ್ಚುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಬಿಸಿ ಗಾಳಿಯ ವಾತಾವರಣ ಉಂಟಾಗಿದೆ. ಇದರಿಂದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ.

‘12 ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಬಿಸಿಗಾಳಿ

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಸಿ.ಎಸ್‌.ಪಾಟೀಲ್‌, ‘12 ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಬಿಸಿಗಾಳಿಯ ವಾತಾವರಣ ಮುಂದುವರೆಯಲಿದೆ. ಕಲಬುರಗಿಯಲ್ಲಿ ಸದ್ಯ 42 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದು, ಬಿಸಿಗಾಳಿಯಿಂದಾಗಿ 44 ರಿಂದ 45 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಬಹುದು’ ಎಂದರು.


‘ಬೆಂಗಳೂರಿನಲ್ಲಿ ಸದ್ಯ 36 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದು 38 ರಿಂದ 39 ಡಿಗ್ರಿ ಸೆಲ್ಸಿಯಸ್‌ ತಲುಪಬಹುದು. ಕರಾವಳಿ ಜಿಲ್ಲೆಗಳಲ್ಲಿ 38 ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ದಾಖಲಾಗಬಹುದು. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲೂ ಬಿಸಿಗಾಳಿ ಇದೆ’ ಎಂದು ವಿವರಿಸಿದರು.