ಹರಪನಹಳ್ಳಿ ಪಿ.ಜಿ.ಸೆಂಟರ್‌ ದಾಖಲಾತಿ ಆರಂಭ

KannadaprabhaNewsNetwork |  
Published : Aug 17, 2026, 02:45 AM IST
ಹರಪನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಪಿಜಿ ಸೆಂಟರ್‌ ಆರಂಭ ಗೊಳಿಸಲು ನಿಯೋಜನೆ ಗೊಂಡಿರುವ ಮುಬಾರಕ್‌ ಹಾಗೂ ಡಿಗ್ರಿ ಕಾಲೇಜಿನ ಅದ್ಯಾಪಕ ವೃಂದದವರು ಜನರಿಗೆ ಅರಿವು ಮೂಡಿಸಲು  ಮಾಹಿತಿ ಇರುವ ಪ್ಲೆಕ್ಸ್‌ ನ್ನು ಬಿಡುಗಡೆ ಗೊಳಿಸಿದರು. | Kannada Prabha

ಸಾರಾಂಶ

ಉದ್ಘಾಟನೆಗೊಂಡು ಎರಡು ವರ್ಷಗಳ ನಂತರ ಹರಪನಹಳ್ಳಿ ನಗರದಲ್ಲಿ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಅಧೀನದಲ್ಲಿ ಆರಂಭವಾಗಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರ ತನ್ನ ಕಾರ್ಯ ಚಟುವಚಿಕೆಯನ್ನು ಇದೀಗ ಪ್ರಾರಂಭಿಸಿದೆ.

ಬಿ. ರಾಮಪ್ರಸಾದ್ ಗಾಂಧಿ

ಹರಪನಹಳ್ಳಿ: ಉದ್ಘಾಟನೆಗೊಂಡು ಎರಡು ವರ್ಷಗಳ ನಂತರ ಹರಪನಹಳ್ಳಿ ನಗರದಲ್ಲಿ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಅಧೀನದಲ್ಲಿ ಆರಂಭವಾಗಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರ ತನ್ನ ಕಾರ್ಯ ಚಟುವಚಿಕೆಯನ್ನು ಇದೀಗ ಪ್ರಾರಂಭಿಸಿದೆ.

ಸ್ಥಳೀಯ ಹೊಸಪೇಟೆ ರಸ್ತೆಯ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿಗದಿತ ಸ್ಥಳದಲ್ಲಿ ಫೆ. 29, 2024ರಂದು ಶಾಸಕಿ ಎಂ.ಪಿ. ಲತಾ ಅವರು ಈ ಕೇಂದ್ರವನ್ನು ಅಂದಿನ ಉಪಕುಲಪತಿಗಳ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಿದ್ದರು.

ಅಲ್ಲಿಂದ ಈವರೆಗೂ ಸರ್ಕಾರದಿಂದ ಅನುಮತಿ ಸಿಗದ ಕಾರಣ ಆರಂಭಗೊಂಡಿರಲಿಲ್ಲ. ಆದರೆ, ಈ ವರ್ಷವೂ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೂ, ಅನುಮತಿ ಸಿಗುವುದು ಅಂತಿಮ ಹಂತದಲ್ಲಿರುವುದರಿಂದ ದಾಖಲಾತಿ ಪ್ರಕ್ರಿಯೆ ಆರಂಭಗೊಳಿಸಿದ್ದಾರೆ.

ಡಾ. ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ಸಹ ಒಂದು. ಇಂತಹ ತಾಲೂಕಿನಲ್ಲಿ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಆದರೆ, ಕಷ್ಟವಾದರೂ ಚಿಂತೆಯಿಲ್ಲ ಮಕ್ಕಳನ್ನು ಪಿಜಿ ಮಾಡಿಸಬೇಕೆಂಬ ಹಂಬಲ ಇದ್ದೇ ಇದೆ. ಇಲ್ಲಿ ಪಿಜಿ ಸೆಂಟರ್‌ ಉದ್ಘಾಟನೆಯಾದಾಗ ಬಹಳಷ್ಟು ಜನರು ಮಕ್ಕಳನ್ನು ದೂರದೂರಿಗೆ ಕಳಿಸುವುದು ತಪ್ಪಿತು ಎಂದು ಖುಷಿ ಪಟ್ಟಿದ್ದರು. ಆದರೆ ಎರಡು ವರ್ಷವಾದರೂ ದಾಖಲಾತಿ ಆರಂಭಗೊಳ್ಳದಿದ್ದರಿಂದ ಬೇಸರಗೊಂಡಿದ್ದರು.

ನಾಲ್ಕು ದಿನಗಳ ಹಿಂದೆ ಮುಬಾರಕ್‌ ಎಂಬ ಉಪನ್ಯಾಸಕರನ್ನು ಇಲ್ಲಿಗೆ ಮೌಖಿಕವಾಗಿ ನಿಯೋಜನೆ ಮಾಡಲಾಗಿದೆ. ಅವರು ಪಿಜಿ ಸೇರಲು ಆಗಮಿಸುವ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಕೊಡುತ್ತಿದ್ದಾರೆ.

ಕೋರ್ಸ್‌ಗಳ ವಿವರ

ಇಲ್ಲಿಯ ಸ್ತಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಂ.ಎ. ಇಂಗ್ಲೀಷ್, ಎಕಾನಾಮಿಕ್ಸ್‌ ಮತ್ತು ಎಂಕಾಂ ಕೋರ್ಸ್‌ಗಳನ್ನು ಮೊದಲಿಗೆ ತೆರೆಯಲಾಗಿದೆ. ಈ ಕೋರ್ಸ್‌ಗಳಿಗೆ ದಾಖಲಾಗಬಯಸುವವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿ ಅರ್ಜಿಗಳನ್ನು ಪಡೆಯಬಹುದು.

ಆ. 13ರಿಂದಲೇ ಅರ್ಜಿ ಕೊಡಲಾಗುತ್ತಿದೆ. ಆ. 22 ಅಂತಿಮ ದಿನ ಎಂದು ಹೇಳಿದ್ದರೂ ಸಮಯ ವಿಸ್ತರಣೆಯಾಗುತ್ತದೆ ಎಂದು ವಿವಿ ಮೂಲಗಳು ತಿಳಿಸಿವೆ. ಎಂ.ಎ. ಕೋರ್ಸ್‌ಗಳಿಗೆ ವಾರ್ಷಿಕ ₹22,750 ಶುಲ್ಕವಿದ್ದು, ಎಂ.ಕಾಂಗೆ ₹25050 ಶುಲ್ಕವಿದೆ. ಆದಷ್ಟು ಬೇಗ ದಾಖಲಾತಿ ಮಾಡಿಸಿದರೆ ತರಗತಿಗಳು ತ್ವರಿತವಾಗಿ ಆರಂಭಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಪಿಜಿ ತರಗತಿ ನಡೆಸಲು ವ್ಯವಸ್ಥೆ ಮಾಡಿರುವುದು ಸರಿ ಇದ್ದರೂ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್‌ ನಿಲ್ದಾಣದಿಂದ ಬರಲು ಮೂರು ಕಿಲೋ ಮೀಟರ ಆಗುತ್ತದೆ. ಆದ್ದರಿಂದ ನಗರದ ಮಧ್ಯ ಭಾಗದಲ್ಲಿರುವ ಸಪಪೂ ಕಾಲೇಜಿನ ಕಟ್ಟಡದಲ್ಲಿ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದ್ದಾರೆ.

ಹರಪನಹಳ್ಳಿಯಲ್ಲಿ ಪಿಜಿ ಸೆಂಟರ್‌ ಆರಂಭಕ್ಕೆ ಸರ್ಕಾರದ ಅನುಮತಿ ದೊರೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸಿಎಂ ಬದಲಾವಣೆ, ಖಾತೆಗಳ ಹಂಚಿಕೆ ಮಾಡುವ ಕಾರಣಕ್ಕಾಗಿ ವಿಳಂಬವಾಗಿದೆ. ಈ ವರ್ಷವೂ ಸುಮ್ಮನೆ ಹೋಗಬಾರದು ಎಂದು ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ, ಅನುಮತಿ ಕೊಡಿಸುತ್ತೇನೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಹರಪನಹಳ್ಳಿಯಲ್ಲಿ ಪಿಜಿ ಸೆಂಟರ್‌ ತೆರೆಯಲು ಸರ್ಕಾರದ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ ಮಾಡಿದ್ದೇವೆ. ಅಲ್ಲಿಯ ಶಾಸಕರು ಅನುಮತಿ ಕೊಡಿಸುತ್ತಾರೆ. ಒಂದು ವೇಳೆ ಸಿಗದಿದ್ದರೆ ನಮ್ಮ ಬಳ್ಳಾರಿ ವಿವಿಗೆ ದಾಖಲಾತಿ ಆಗಿರುವ ವಿದ್ಯಾರ್ಥಿಗಳನ್ನು ಟ್ಯಾಗ್‌ ಮಾಡಿಕೊಳ್ಳುತ್ತೇವೆ ಎಂದು ಶ್ರೀಕೃಷ್ಣದೇವರಾಯ ವಿವಿ ಉಪಕುಲಪತಿ ಪ್ರೊ. ಮುನಿರಾಜ್‌ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನಿಖೆ ಬಳಿಕ ಶೂಟೌಟ್‌ ಪ್ರಕರಣಕ್ಕೆ ಸ್ಪಷ್ಟತೆ: ಡಿಕೆಶಿ
ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ: ಪ್ರಭಾಕರ ಜೋಶಿ