ಹದಿ ಹರೆಯದ ವಯಸ್ಸು, ಹುಮ್ಮಸ್ಸು ಸರಿ ದಿಕ್ಕಿನಲ್ಲಿರಲಿ: ಡಾ.ಬಸವಕುಮಾರ ಸ್ವಾಮೀಜಿ

KannadaprabhaNewsNetwork | Published : Jul 28, 2024 2:01 AM

ಸಾರಾಂಶ

ಚಿತ್ರದುರ್ಗದ ಪ್ರತಿಷ್ಠಿತ ಎಸ್‌ಆರ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ಎಸ್ಪಿ ಧರ್ಮೇಂದ್ರ ಕುಮಾರ್, ಬಿ.ಎ.ಲಿಂಗಾರೆಡ್ಡಿ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹದಿ ಹರೆಯದ ವಯಸ್ಸು, ಹುಮ್ಮಸ್ಸು ಸರಿ ದಿಕ್ಕಿನಲ್ಲಿರಲಿ. ಶೈಕ್ಷಣಿಕ ಅಭ್ಯುದಯಕ್ಕೆ ತೆರೆದುಕೊಳ್ಳಲಿ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ನಗರದ ಪ್ರತಿಷ್ಠಿತ ಎಸ್ ಆರ್ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ಭವಿಷ್ಯ ರೂಪಿಸಿಕೊಳ್ಳುವ ಸ್ಪಷ್ಟ ಗುರಿ ಹೊಂದಬೇಕಾದದ್ದು ಅಗತ್ಯವೆಂದರು.

ಇತ್ತೀಚೆಗಿನ ವರ್ಷಗಳಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ 25 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಲಭ್ಯವಾಗುತ್ತಿದೆ. ದ್ವಿತೀಯ ಪಿಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ. ಸಮಯ ವ್ಯರ್ಥ ಮಾಡದೆ ಅಧ್ಯಯನದ ಕಡೆ ಗಮನ ಕೇಂದ್ರೀಕರಿಸಬೇಕು. ಗುರಿ ಸಾಧಿಸಬೇಕಾದರೆ ಹಿಂಜರಿಕೆ ಬೇಡ. ಸಾಧಿಸಬಲ್ಲೆ ಎಂಬ ಛಲ ಇರಬೇಕು. ಸತತ ಪರಿಶ್ರಮದ ಮೂಲಕ ಸಾಧನೆ ಶಿಖರ ತಲುಪಬೇಕೆಂದರು.

ಎಸ್ಆರ್‌ಎಸ್ ವಿದ್ಯಾಸಂಸ್ಥೆಯಲ್ಲಿ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಖುಷಿ ತಂದಿದೆ. ಫಲಿತಾಂಶದಲ್ಲಿಯೂ ಇತರೆ ಕಾಲೇಜುಗಳಿಗಿಂತ ಮುಂದೆ ಇದೆ. ವಿಜ್ಞಾನ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಂಭೀರ ಸ್ಪರ್ಷ ನೀಡಬೇಕು. ಎಂತಹ ಕಠಿಣ ಸನ್ನಿವೇಶ ಬಂದರೂ ಧೈರ್ಯದಿಂದ ಮುನ್ನುಗ್ಗಬೇಕು. ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು. ಪಾಲಕರು ಹಾಗೂ ವಿದ್ಯೆ ಕಲಿಸಿದ ಗುರು ಮತ್ತು ಅವಕಾಶ ಕೊಟ್ಟ ವಿದ್ಯಾ ಸಂಸ್ಥೆಗೆ ಹೆಸರು ತರುವಂತೆ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮಾತನಾಡಿ, ಎಲ್ಲರು ಎಂಜಿನಿಯರ್, ಡಾಕ್ಟರ್ ಆಗಲು ಸಾಧ್ಯವಿಲ್ಲ. ವಕೀಲರು, ಪತ್ರಕರ್ತ, ಸಂಶೋಧಕ, ಕೃಷಿಕರೂ ಆಗಬಹುದು. ಆಧುನಿಕ ಸಂದರ್ಭದಲ್ಲಿ ಈ ವೇಳೆ ಗೂಗಲ್‌ನಿಂದ ಅಧ್ಯಯನದ ಎಲ್ಲ ವಿಷಯ ಪಡೆದುಕೊಳ್ಳಬಹುದು. ಇಂಟರ್ ನೆಟ್ ನಿಂದಾಗಿ ಕೋಚಿಂಗ್ ಕಡ್ಡಾಯವೆಂಬುದು ತುಸು ಹಿಂದೆ ಸರಿದಿದೆ ಎಂದರು.

18 ವರ್ಷಗಳ ಹಿಂದೆ ನಾನೂ ಕೂಡಾ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದೆ ಎಂದು ಹಳೆಯದ ನೆನಪಿಸಿಕೊಂಡ ಧರ್ಮೇಂದ್ರ ಕುಮಾರ್ ಯಾವುದೇ ಒಂದು ಪರೀಕ್ಷೆ ಜೀವನ ನಿರ್ಧರಿಸುವುದಿಲ್ಲ. ಅದು ಕೇವಲ ಅವಕಾಶವಷ್ಟೇ. ಜೊತೆಗೆ ನಿರಾಸೆಯನ್ನೂ ಮೂಡಿಸಬಾರದು. ಪಾಲಕರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಗಳಿಗೆ ಧಕ್ಕೆಯಾಗದಂತೆ ಅಧ್ಯಯದಲ್ಲಿ ತೊಡಬೇಕೆಂದು ಸಲಹೆ ಮಾಡಿದರು.

ಪ್ರಾಚಾರ್ಯ ಜಿ.ಸತೀಶ್ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ವಿದ್ಯಾರ್ಥಿಗಳಾದ ಎನ್.ಮದನ್, ಪಿ.ಟಿ.ಸೃಜನ್ ಅವರುಗಳು ತಮ್ಮ ಸಾಧನೆಗೆ ಪೂರಕವಾದ ಅನುಭವಗಳ ಹಂಚಿಕೊಂಡರು. ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿರನ್ನು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನತುಂಬಿ ಗೌರವಿಸಿದರು. ಹಿರಿಯ ವಿದ್ಯಾರ್ಥಿಗಳಾದ ಪ್ರಣತಿ, ಎಸ್.ನೇಹಾ ಜೆಇಇ,ನೀಟ್ ಸೇರಿದಂತೆ ವಿವಿಧ ಪರೀಕ್ಷೆ ಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಯಶಸ್ವಿಯಾದ ವಿದ್ಯಾರ್ಥಿಗಳು, ಅವರ ಪಾಲಕರನ್ನು ಹಾಗೂ ಗಣ್ಯರನ್ನು ಗೌರವಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ್, ಆಡಳಿತಾಧಿಕಾರಿ ಟಿ.ಎಸ್.ರವಿ, ನಂದಕುಮಾರ್, ಮನೋಹರ್, ರಾಮಕೃಷ್ಣ ಶಾಸ್ತ್ರಿ ಡಿ.ಶ್ರೀನಿವಾಸಕುಮಾರ್ ಇದ್ದರು.

Share this article