ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಕಲಿಕೆ ಜೊತೆಗೆ ಕೌಶಲ್ಯ 2.0 ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರ
ಯುವಕರು ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉದ್ಯೋಗ, ಜಾಗತಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಪಾತ್ರ ನಿರ್ವಹಿಸುತ್ತಾರೆ ಎಂದು ಕಲಬುರಗಿಯ ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಗೊಳ್ಳೆ ಶಿವಶರಣ ಬಿ. ಹೇಳಿದರು.
ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ಸಹಯೋಗದೊಂದಿಗೆ ಕಲಿಕೆ ಜೊತೆಗೆ ಕೌಶಲ್ಯ 2.0 ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.ಶಿಕ್ಷಣ ಕ್ಷೇತ್ರ ವೇಗವಾಗಿ ಬದಲಾಗುತ್ತಿರುವುದರಿಂದ ಉದ್ಯೋಗ ಸಂಬಂಧಿತ ಕೌಶಲ್ಯಗಳು ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ವಂಚಿತರ ಪ್ರಮಾಣ ಶೇ.60 ರಷ್ಟು ಇದೆ. ಬಹುಮುಖ ಪ್ರತಿಭೆಗಳು ಮಾತ್ರ ಉದ್ಯೋಗಕ್ಕೆ ಆರ್ಹರಾಗಿದ್ದಾರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ವಿಶೇಷ ಆಹ್ವಾನಿತರಾಗಿ ವಿಡಿಯೋ ಸಂವಾದದ ಮೂಲಕ ಕಾಲೇಜು ಶಿಕ್ಷಣ ಬೆಂಗಳೂರು ನಿರ್ದೇಶಕಿ ಪ್ರೊ.ಶೋಭಾ ಜಿ. ಮಾತನಾಡಿ, ಶಿಕ್ಷಣ ರಂಗದಲ್ಲಿ ಪದವಿ ಜೊತೆಗೆ ಜ್ಙಾನಾಧಾರಿತ ಕೌಶಲ್ಯಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ಈಗಾಗಲೇ ನಾಲ್ಕು ವಿಶ್ವವಿದ್ಯಾಲಯಗಳ 28 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌಶಲ್ಯವೃದ್ಧಿ ಪಡೆಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒಲವು ಹೊಂದಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಸ್ಪೂರ್ತಿ ಪಡೆದು, ಕೌಶಲ್ಯಗಳ ಕೊರತೆಯನ್ನು ಹೋಗಲಾಡಿಸಬೇಕು. ಕೌಶಲ್ಯ ಆಧಾರಿತ ಶಿಕ್ಷಣದಿಂದ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ನಾವೆಲ್ಲರು ಶ್ರಮವಹಿಸೋಣ ಎಂದು ಹೇಳಿದರು.
ಈ ವೇಳೆ ವಿವಿಯ ಅಧೀನದ ವಿವಿಧ ಕಾಲೇಜು ಪ್ರಾಂಶುಪಾಲರು ಹಾಗು ಸಿಬ್ಬಂದಿ, ವಿವಿಯ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳು ಇದ್ದರು.