ಕಾಯಕ ತತ್ವ ಅಳವಡಿಸಿಕೊಳ್ಳಿ

KannadaprabhaNewsNetwork | Published : Aug 20, 2024 12:58 AM

ಸಾರಾಂಶ

ಕನಕಪುರ: ನುಲಿಯ ಚಂದಯ್ಯನವರು 12ನೇ ಶತಮಾನದಲ್ಲಿ ಕಾಯಕ ತತ್ವ ಸಾರಿ, ವಚನಗಳ ಮೂಲಕ ಮೇಲು ಕೀಳೆಂಬ ತಾರತಮ್ಯ ತೊಡೆದು ಹಾಕುವ ಕೆಲಸ ಮಾಡಿದ್ದರು ಎಂದು ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ತಿಳಿಸಿದರು.

ಕನಕಪುರ: ನುಲಿಯ ಚಂದಯ್ಯನವರು 12ನೇ ಶತಮಾನದಲ್ಲಿ ಕಾಯಕ ತತ್ವ ಸಾರಿ, ವಚನಗಳ ಮೂಲಕ ಮೇಲು ಕೀಳೆಂಬ ತಾರತಮ್ಯ ತೊಡೆದು ಹಾಕುವ ಕೆಲಸ ಮಾಡಿದ್ದರು ಎಂದು ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ನುಲಿಯ ಚಂದಯ್ಯನವರ ಜಯಂತ್ಯುತ್ಸವದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ನುಲಿಯ ಚಂದಯ್ಯ ಕಾಯಕ ತತ್ವವನ್ನು ಅಳವಡಿಸಿಕೊಂಡು ತಮ್ಮ ವಚನಗಳ ಮೂಲಕವೇ ಜಾತಿ-ಭೇದ ಎಂಬ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ್ದರು.

12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ತಾಂಡವವಾಡುತ್ತಿತ್ತು. ಇಂದಿಗೂ ಅದು ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ. ಇದು ಕೊನೆಯಾಗಬೇಕು. ಬಸವಣ್ಣ, ನುಲಿಯ ಚಂದಯ್ಯರಂತಹ ಮಹನೀಯರ ತತ್ವ, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಾವೆಲ್ಲರೂ ಜಾತಿ ವ್ಯವಸ್ಥೆಯಿಂದ ಹೊರಬಂದು ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.

ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಬಸವಣ್ಣ, ಮಡಿವಾಳ ಮಾಚಿದೇವ, ನುಲಿಯ ಚಂದಯ್ಯರ ಹಾದಿಯಾಗಿ ಎಲ್ಲ ಶರಣರು ಕಾಯಕ ತತ್ವವನ್ನು ಪ್ರತಿಪಾದಿಸುತ್ತಿದ್ದರು. ಅಗತ್ಯಕ್ಕಿಂತ ಹೆಚ್ಚಾಗಿ ಏನನ್ನು ಬಯಸುತ್ತಿರಲಿಲ್ಲ, ಹಾಗಾಗಿ ಶರಣರ ಕಾಲದಲ್ಲಿ ಕಲ್ಯಾಣ ಕರ್ನಾಟಕವಾಗಿ ಎಲ್ಲವೂ ಸುಭಿಕ್ಷವಾಗಿತ್ತು, ಆದರೆ ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಂಡು ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದಾರೆ. ಕಾಯಕ ಇಲ್ಲದಿರುವ ದೇಶ ಯಾವುದೇ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

-

ಕೆ ಕೆ ಪಿ ಸುದ್ದಿ 01: ಕನಕಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ನುಲಿಯ ಚಂದಯ್ಯ ನವರ ಜಯಂತಿ ಆಚರಿಸಲಾಯಿತು.

Share this article