ಕೆಂಪೇಗೌಡ ಜಯಂತಿ ಕಾರ್ಯಕ್ರಮ
ಒಂದು ನಿರ್ದಿಷ್ಟ ಕೆಲಸದ ಕುರಿತು ಯೋಜನೆ ರೂಪಿಸಿದಾಗ ಅದರ ಬಗ್ಗೆ ನಮಗೆ ಇಚ್ಛಾಶಕ್ತಿ ಬಹಳ ಮುಖ್ಯ. ಈ ವಿಷಯವನ್ನು ನಾವು ಕೆಂಪೇಗೌಡರ ಜೀವನ ಚರಿತ್ರೆಯಿಂದ ಕಲಿತು, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾವೆಲ್ಲರೂ ಇಂದು ನೋಡುತ್ತಿರುವ ಆಧುನಿಕ ಬೆಂಗಳೂರಿನ ಮೂಲ ನಿರ್ಮಾತೃ ಕೆಂಪೇಗೌಡರು. ಅವರ ದೂರದೃಷ್ಟಿ, ಅಭಿವೃದ್ಧಿ ಕುರಿತಾಗಿ ಅವರಿಗಿದ್ದ ಇಚ್ಛಾಶಕ್ತಿ, ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗುವಂತದ್ದು. ನಿರ್ದಿಷ್ಟ ಗುರಿ ಸಾಧಿಸಲು ನಾವು ವಹಿಸಬೇಕಾದ ಶ್ರಮ, ಇರಬೇಕಾದ ಶ್ರದ್ಧೆಯನ್ನು ಕೆಂಪೇಗೌಡರಿಂದ ಕಲಿಯಬೇಕು. ಅವರ ಅಭಿವೃದ್ಧಿಪರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಇಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಜೀವನ ಶೈಲಿ ಮುಂತಾದ ವಿಷಯಗಳಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಮೂಲ ಕಾರಣ ಕೆಂಪೇಗೌಡರು ಹಾಗೂ ಅವರ ವ್ಯವಸ್ಥಿತ ನಗರ ನಿರ್ಮಾಣ ಕುರಿತ ಯೋಚನೆಗಳು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಮಾತನಾಡಿ, ಸುಮಾರು 400 ಕಿಮೀ ದೂರದಲ್ಲಿರುವ ಬೆಂಗಳೂರಿನ ನಿರ್ಮಾತೃ ಬಗ್ಗೆ, ಬೆಂಗಳೂರಿನ ಬಗ್ಗೆ ಇಂದು ನಾವೆಲ್ಲರೂ ತಿಳಿದುಕೊಳ್ಳುತ್ತಿದ್ದೇವೆ. ಆ ಊರಿನ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದೇವೆ. ಆದರೆ ನಮ್ಮ ಜಿಲ್ಲೆಯ, ಸ್ಥಳೀಯ ವಿಷಯಗಳ ಬಗ್ಗೆ, ಚರಿತ್ರೆ, ಇತಿಹಾಸದ ಬಗ್ಗೆ ನಾವು ಪ್ರಮುಖವಾಗಿ ತಿಳಿದುಕೊಳ್ಳಬೇಕು. ನಮ್ಮ ಜಿಲ್ಲೆಯೂ ಕೂಡ ಅನೇಕ ಚಾರಿತ್ರಿಕ, ಐತಿಹಾಸಿಕ ಹಿನ್ನೆಲೆ, ಘಟನೆಗಳಿಗೆ ಸಾಕ್ಷಿಯಾಗಿದೆ. ನಮ್ಮ ಸ್ಥಳೀಯ ಪರಿಸರದ ಬಗ್ಗೆ ನಾವು ಮೊದಲು ತಿಳಿದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ನಮ್ಮ ಜಿಲ್ಲೆಯ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿ ವಹಿಸಿ ನಮ್ಮ ಸ್ಥಳೀಯ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತ ಭವನದ ಸಿಬ್ಬಂದಿ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು. ಶಕುಂತಲಾ ಬೇನಾಳ ಹಾಗೂ ತಂಡದವರು ಸುಗಮ ಸಂಗೀತ ಹಾಗೂ ನಾಡಗೀತೆ ಪ್ರಸ್ತುತ ಪಡಿಸಿದರು.