ಮುಳಗುಂದ: ವಿಶ್ವಸಂಸ್ಥೆ ಧ್ಯಾನ ದಿನಾಚರಣೆಗೆ ಮಾನ್ಯತೆ ನೀಡಿದೆ. ಧ್ಯಾನ ದಿನಾಚರಣೆ ಜಗತ್ತಿನಲ್ಲಿ ಅತೀ ಅಮೂಲ್ಯವಾದದ್ದು, ನಿತ್ಯ ಬದುಕಿನಲ್ಲಿ ಧ್ಯಾನ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡರೆ ಆನಂದದ ಜೀವನ ನಡೆಸಲು ಸಾಧ್ಯವಿದೆ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.
ಯೋಗ, ಧ್ಯಾನದಿಂದ ನಾವು ಏನಾನ್ನದಾರು ಸಾಧಿಸಲಬಲ್ಲೆವು. ಹಿಂದೆ ಋಷಿ, ಮುನಿಗಳು, ಶರಣ ಸಂತರು ಯೋಗ, ಧ್ಯಾನ ಸಾಧನದಿಂದ ತಮ್ಮೊಳಗಿನ ಅಧ್ಬುತ ಶಕ್ತಿಯಿಂದ ಸಿದ್ಧಿಪುರುಷರಾಗಿದ್ದಾರೆ. ನಮ್ಮ ಮನಸ್ಸನ್ನು ಹೇಗೆ ಪ್ರಶಾಂತಗೊಳಿಸುವುದು ಒಂದು ಕಲೆ, ಆ ಕಲೆಯೇ ಧ್ಯಾನ. ನಿತ್ಯ ಜೀವನದಲ್ಲಿ ಯೋಗ, ಧ್ಯಾನವಿದ್ದರೆ ಆರೋಗ್ಯವು ವೃದ್ಧಿಯಾಗುತ್ತದೆ. ಮನಸ್ಸು ಹತೋಟಿಯಲ್ಲಿ ಇರುತ್ತದೆ. ಅಂತಹ ಒಂದು ತಾಕತ್ತು ಧ್ಯಾನದಲ್ಲಿದೆ ಎಂದರು.
ಜಿಲ್ಲಾ ಯುವ ಪ್ರಭಾರಿ ಪ್ರಕಾಶ ಮದ್ದಿನ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಸಂಸ್ಥೆಯು ಡಿ. 21ನ್ನು ವಿಶ್ವಧ್ಯಾನ ದಿನವನ್ನಾಗಿ ಘೋಷಣೆ ಮಾಡಿದೆ. ಈಗಾಗಲೇ ಪ್ರತಿ ವರ್ಷ ಜೂ.21 ರಂದು ವಿಶ್ವಯೋಗ ದಿನ ಆಚರಿಸುತ್ತಿದ್ದೇವೆ. ಯೋಗಕ್ಕೆ ಈಗ ಧ್ಯಾನವೂ ಸೇರಿಕೊಂಡು ಯೋಗದರ್ಶನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.ಇಂದು ನಮಗೆ ಎಷ್ಟೇ ಅನುಕೂಲತೆ, ತಂತ್ರಜ್ಞಾನವಿದ್ದರೂ ಒತ್ತಡದಲ್ಲಿ ಮನುಷ್ಯ ಇಂದು ಬದುಕು ನಡೆಸುತ್ತಾ ಇದ್ದಾನೆ, ಹಿಂದಿನ ದಿನಮಾನಗಳಲ್ಲಿ ಯಾವುದೇ ಅನುಕೂಲಕತೆಗಳು ಇಲ್ಲದಿದ್ದರು, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮೀಕ, ಕೌಟುಂಬಿಕವಾಗಿ ಅರೋಗ್ಯಕರ ಜೀವನ ನಡೆಸುತ್ತಿದ್ದರು. ಆದರೆ ಇದರ ಬಗ್ಗೆ ನಾವು ಇಂದು ಚಿಂತನ, ಮಂಥನ ಮಾಡುವ ಮೂಲಕ ನಾವು ಬದುಕುವ ಶೈಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಯೋಗದಲ್ಲಿ ಜ್ಞಾನಕ್ಕಾಗಿ ಸ್ವಲ್ಪ ಸಮಯ ನೀಡಿದರೆ,ನೀವು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಆಯಸ್ಕಾಂತ ತರಂಗಗಳು ಪೂರಕವಾಗಿ ಜ್ಞಾನದಲ್ಲಿ ಕೆಲಸ ಮಾಡುತ್ತವೆ ಎಂದರು.
ಈ ವೇಳೆ ಬಾ.ಮ.ಶಿ.ಶಿ ಸಮಿತಿ ಅಧ್ಯಕ್ಷ ಎಂ.ಡಿ.ಬಟ್ಟೂರ, ವೈದ್ಯ ಎಸ್.ಸಿ.ಚವಡಿ ಮಾತನಾಡಿದರು.ಪಪಂ ಸದಸ್ಯ ಎಸ್.ಸಿ.ಬಡ್ನಿ, ಪ್ರಿಯಾಂಕ ಶಿರಬಡಗಿ, ದಶರಥ ಕೋಟೆಗೌಡ್ರ, ಹರ್ಷಲಾ ದೇಶಪಾಂಡೆ, ಪ್ರಾ.ಅಶೋಕ ಅಂಗಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.