ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ತರಡಕೆರೆ ಗ್ರಾಮದಲ್ಲಿ ಮದ್ದೂರಿನ ಕೃಷಿ ಇಲಾಖೆ, ಭಾರತೀನಗರದ ರೈತ ಸಂಪರ್ಕ ಕೇಂದ್ರದಿಂದ ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯ 150 ಕೃಷಿಕರಿಗೆ ಇಲಾಖೆಯಿಂದ ಕೃಷಿ ಪರಿಕರ ವಿತರಿಸಿ ಮಾತನಾಡಿ, ಜಿಲ್ಲೆಯ ರೈತರು ನೀರನ್ನು ಹೆಚ್ಚು ಬಳಸುವುದರಿಂದ ಮಣ್ಣನ ಫಲವತ್ತತೆ ನಶಿಸುತ್ತಿದೆ ಎಂದರು.
ರೈತರು ಹೆಚ್ಚು ಕಬ್ಬು, ಭತ್ತ ಬೆಳೆಯುವ ಜೊತೆಗೆ ತರಕಾರಿಗಳು, ಜೋಳದಂತಹ ಮಿಶ್ರ ಬೇಸಾಯದ ಪದ್ಧತಿ ಅಳವಡಿಸಿಕೊಂಡು ಅಗತ್ಯ ಸಮಯದಲ್ಲಿ ಕೃಷಿ ಇಲಾಖೆ ಸಲಹೆ ಸೂಚನೆ ಪಡೆದು ದ್ವಿದಳ ಧಾನ್ಯಗಳು ಬೆಳೆಯಬೇಕು ಎಂದರು.ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಮಣ್ಣಿನ ಫಲವತ್ತತೆಯೂ ಉಳಿದು ರಾಸಾಯನಿಕ ಗೊಬ್ಬರಗಳನ್ನು ಕಡಿಮೆಯಾಗಿ ಬಳಸಿ ಸಾವಯವ ಗೊಬ್ಬರ ಹಾಗೂ ಕೃಷಿ ಇಲಾಖೆಯವರು ಸೂಚಿಸುವ ಪೋಷಕಾಂಶಯುಳ್ಳ ಕೃಷಿ ಉತ್ಪನ್ನ ಹಾಗೂ ಧಾನ್ಯಗಳನ್ನು ಬಳಸಿ ಉತ್ತಮ ಬೆಳೆ ಬೆಳೆದು ಲಾಭ ಗಳಿಸಬೇಕು ಎಂದರು.
ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಮಾತನಾಡಿ, ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯ ಹಾಗೂ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕಾದ ವಿಧಾನಗಳು ಬಗ್ಗೆ ಭತ್ತ ಕಬ್ಬಿನ ನಂತರ ಹಲಸಂದೆ ಬೆಳೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ನಂತರ ಶಾಸಕ ಉದಯ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನಿನಲ್ಲಿ ಹಲಸಂದೆ ಬೀಜವನ್ನು ಚೆಲ್ಲುವ ಮೂಲಕ ರೈತರಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಜಿಪಂ ಸದಸ್ಯ ಕೆ.ಕುಮಾರರಾಜು, ತಾಲೂಕು ಸಹಾಯಕ ಕೃಷಿ ಅಧಿಕಾರಿ ಪ್ರತಿಭಾ, ಕೆ.ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಸುಧಾ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಾದ ಭವಾನಿ, ಕರುಣಾ, ತಿಮ್ಮೇಶ್, ಮೊಳ್ಳೆನಿಂಗೇಗೌಡ, ಮರಿಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.