ಹಾಸನ: ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ 2031ರ ಅಂಕಿ ಅಂಶಗಳು ಮುಂದಿನ ದಿನಗಳ ಅಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ದಾಖಲೆಗಳಾಗಲಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್. ಹೇಳಿದರು.ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ 2031ರ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಂದಿರ ಮರಣ ಪ್ರಮಾಣ, ಶಿಶು ಮರಣ, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಸೇರಿದಂತೆ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ನಿಖರವಾಗಿ ದಾಖಲಿಸುವ ಅಗತ್ಯವಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 17 ಮಾನದಂಡಗಳನ್ನು ಗುರುತಿಸಲಾಗಿದ್ದು, ಅವುಗಳ ಆಧಾರದಲ್ಲಿ ವರದಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.ಮಾನವ ಅಭಿವೃದ್ಧಿಯಲ್ಲಿ ಜೀವನಮಟ್ಟ, ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಸೂಚಕಗಳಾಗಿವೆ. ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗೆ ಶೇ.26ರಷ್ಟು ಜನಸಂಖ್ಯೆ ಇದ್ದು, ದೇಶದ ಸಾಕ್ಷರತಾ ಪ್ರಮಾಣ ಶೇ.80ರಷ್ಟಿದೆ. ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.ಜಿಲ್ಲಾ ಮಾನವ ಅಭಿವೃದ್ಧಿ ವರದಿಯನ್ನು ನಿಖರ ಹಾಗೂ ಸಮಗ್ರವಾಗಿ ಸಿದ್ಧಪಡಿಸುವುದು ಅತ್ಯಂತ ಅಗತ್ಯವಾಗಿದ್ದು, ಈ ಸಂಬಂಧ ಎಲ್ಲಾ ಇಲಾಖೆಗಳಿಂದ ಫೆಬ್ರವರಿ 10ರೊಳಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು ಎಂದು ಸಿಇಒ ಪೂರ್ಣಿಮಾ ಬಿ.ಆರ್. ನಿರ್ದೇಶನ ನೀಡಿದರು.ಇಲಾಖೆಗಳಿಗೆ ಮಂಜೂರಾದ ಅನುದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ಮಾರ್ಚ್ ಅಂತ್ಯದೊಳಗೆ ಶೇ.100ರಷ್ಟು ಅನುದಾನ ಸದ್ಬಳಕೆ ಆಗುವಂತೆ ಎಲ್ಲಾ ಇಲಾಖೆಗಳು ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಅವರು ತಾಕೀತು ಮಾಡಿದರು.ಎಸ್‌ಎಲ್‌ಆರ್‌ಡಿ ಸಂಸ್ಥೆಯ ಸಮಾಲೋಚಕ ಗಣೇಶ್ ಪ್ರಸಾದ್ ಮಾತನಾಡಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ 2031 ದೇಶದ ಪ್ರಗತಿಯನ್ನು ಅಳೆಯುವ ಕನ್ನಡಿಯಾಗಿದ್ದು, ವರದಿಯಲ್ಲಿ ಬಳಸಲಾಗುವ ಸೂಚಕಗಳು, ಸಂಬಂಧಿತ ಇಲಾಖೆಗಳ ಮಾಹಿತಿಯನ್ನು ಸಂಗ್ರಹಿಸುವ ವಿಧಾನ ಹಾಗೂ ಅದರ ಮಹತ್ವದ ಬಗ್ಗೆ ವಿವರಿಸಿದರು.ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಿದ್ದು, ರೈಲ್ವೆ ಸಾರಿಗೆಯಲ್ಲಿ ದೇಶವು ವಿಶ್ವದಲ್ಲೇ ಪ್ರಮುಖ ಸ್ಥಾನದಲ್ಲಿದೆ. ಆರೋಗ್ಯ ಸೇವೆಗಳಲ್ಲೂ ಸಾಕಷ್ಟು ಪ್ರಗತಿ ಕಂಡರೂ, ಇನ್ನೂ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.ಮಾನವ ಅಭಿವೃದ್ಧಿ ಸೂಚ್ಯಂಕ 0ರಿಂದ 1ರ ಮಟ್ಟದಲ್ಲಿ ಅಳೆಯಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಮಾನವ ಅಭಿವೃದ್ಧಿ ವರದಿಯನ್ನು 1999, 2005 ಮತ್ತು 2015ರಲ್ಲಿ ಸಿದ್ಧಪಡಿಸಲಾಗಿದ್ದು, ಇದೀಗ 2025ರ ವರದಿ ಸಿದ್ಧಗೊಳ್ಳುತ್ತಿದೆ. ಪ್ರಸ್ತುತ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ 0.629 ಆಗಿದ್ದು, ಕರ್ನಾಟಕ ರಾಜ್ಯದ ಸೂಚ್ಯಂಕ 0.644 ಆಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾಧಿಕಾರಿ ಎನ್. ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.