ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರದ ಮೇಲೆ ಬೆರಳು ತೋರಿಸುವ ಬದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು. ಭ್ರಷ್ಟಾಚಾರ ವಿಚಾರದಲ್ಲಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಮಾನತು ಮಾಡಬೇಕಿತ್ತು. ೨೫ ಲಕ್ಷ ಲಂಚ ಪ್ರಕರಣದಲ್ಲಿ ಅಬಕಾರಿ ಡಿಸಿ ಸೇರಿದಂತೆ ಅಧಿಕಾರಿಗಳು ಲೋಕಾಯುಕ್ತರ ಕೈಗೆ ಸಿಕ್ಕಿರುವುದೇ ಭ್ರಷ್ಟಾಚಾರದ ಜೀವಂತ ಸಾಕ್ಷಿ ಎಂದರು. ಈ ಸರ್ಕಾರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಅಪಾರ ರಕ್ಷಣೆ ದೊರೆಯುತ್ತಿದೆ ಎಂದು ಕಿಡಿಕಾರಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ನಿಲುವು ಸ್ಪಷ್ಟವಾಗಿದ್ದು, ಹೊಂದಾಣಿಕೆಯ ಮೂಲಕವೇ ಚುನಾವಣೆ ಎದುರಿಸುವುದು ನಮ್ಮ ಆದ್ಯತೆ ಎಂದು ಹೇಳಿದರು. ಈಗಾಗಲೇ ಬಿಜೆಪಿ ನಾಯಕರೊಂದಿಗೆ ಒಂದು ಸುತ್ತು ಚರ್ಚೆ ನಡೆಸಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು. ಹಾಸನದಲ್ಲಿ ಕೆಲವರಿಗೆ ಅಸಮಾಧಾನ ಇದ್ದರೂ, ಪಕ್ಷದ ಕೇಂದ್ರ ನಾಯಕರು ಅದನ್ನು ಸರಿಪಡಿಸಲಿದ್ದಾರೆ ಎಂದು ಹೇಳಿದರು.ಜೆಡಿಎಸ್ ೨೫ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಇದೇ ಜನವರಿ ತಿಂಗಳು ೨೪ರಂದು ಹಾಸನ ಜಿಲ್ಲೆಯಲ್ಲಿ ಮೊದಲ ಬೃಹತ್ ಸಭೆ ನಡೆಯಲಿದೆ. ದೇವೇಗೌಡರ ಜನ್ಮಭೂಮಿಯಾದ ಹಾಸನದಿಂದಲೇ ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡಲಾಗುತ್ತದೆ ಎಂದು ಘೋಷಿಸಿದರು. ಹಾಸನ ಜಿಲ್ಲೆಯ ಜನರು ದೇವೇಗೌಡರಿಗೆ ನೀಡಿದ ಶಕ್ತಿಯಿಂದಲೇ ಅವರು ರಾಷ್ಟ್ರಮಟ್ಟದ ನಾಯಕರಾದರು. ಜಿಲ್ಲೆಯ ಜನತೆ ಹಾಗೂ ಜೆಡಿಎಸ್ ನಡುವೆ ಅವಿನಾಭಾವ ಸಂಬಂಧವಿದೆ ಎಂದರು. ಅಹಿಂದ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ೨೦೨೩ರಿಂದ ೨೦೨೫ರವರೆಗೆ ೧.೬೪ ಲಕ್ಷ ಒಬಿಸಿ ಹಾಗೂ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ ಸರ್ಕಾರ ವಂಚಿಸಿದೆ ಎಂದು ಆರೋಪಿಸಿದರು. ಅಹಿಂದ ಹೆಸರಿನಲ್ಲಿ ಮುಖ್ಯಮಂತ್ರಿ ಕುರ್ಚಿ ಗಟ್ಟಿಗೊಳಿಸಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.ಜೆಡಿಎಸ್ ಶಾಸಕಿ ಕರಿಯಮ್ಮಗೆ ಬೆದರಿಕೆ ವಿಚಾರ ಉಲ್ಲೇಖಿಸಿದ ಕುಮಾರಸ್ವಾಮಿ, ಇದು ಒಬ್ಬರ ಸಮಸ್ಯೆಯಲ್ಲ, ರಾಜ್ಯದಲ್ಲಿ ಪ್ರತಿದಿನ ನಡೆಯುತ್ತಿರುವ ದುರ್ಬಳಕೆಯ ಉದಾಹರಣೆ ಎಂದರು. ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡರಿಗೆ ಧಮ್ಕಿ ಹಾಕಿದ ಆರೋಪಿಯ ಬಂಧನವಾಗದಿರುವುದು ಗೃಹ ಇಲಾಖೆ ವೈಫಲ್ಯಕ್ಕೆ ಸಾಕ್ಷಿ ಎಂದರು. ಮುಂದಿನ ದಿನಗಳಲ್ಲಿ ೨೦೨೮ರ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಹಾಸನದ ಪುಣ್ಯಭೂಮಿಯಿಂದಲೇ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುತ್ತದೆ. ಇದು ಜನತಾದಳಕ್ಕೆ ಅತ್ಯಂತ ಮಹತ್ವದ ಸಭೆಯಾಗಿದ್ದು, ಹಬ್ಬದಂತೆ ಆಚರಿಸುವ ಮೂಲಕ ಜನತೆಗೆ ಸ್ಪಷ್ಟ ರಾಜಕೀಯ ಸಂದೇಶ ನೀಡಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಸಚಿವರು ಹಾಗೂ ಶಾಸಕರಾದ ಎಚ್ ಡಿ ರೇವಣ್ಣ, ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ, ಸಾ ರಾ ಮಹೇಶ್, ಶಾಸಕ ಸ್ವರೂಪ್ ಪ್ರಕಾಶ್, ಭೋಜೇಗೌಡ, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಜೆಡಿಎಸ್ ವಕ್ತಾರ ಹೊಂಗೆರೆ ರಘು, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್. ಅನಿಲ್ ಕುಮಾರ್, ಸಿ.ಆರ್. ಶಂಕರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಮುಖಂಡರಾದ ಬೂವನಹಳ್ಳಿ ಸ್ವಾಮಿಗೌಡ , ಬಾಣಾವರ ಅಶೋಕ್, ಹೊಸೂರು ಗಂಗಾಧರ್, ಕೆಂಕೆರೆ ಕೇಶವ, ಬಿದರಕೆರೆ ಜಯರಾಮ್, ಬೇಲೂರು ನಾಗರಾಜ್, ಬಿಕ್ಕೋಡು ನಟರಾಜ್ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ, ಕಣದಹಳ್ಳಿ ಮಂಜೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.