ಗದಗ: ದೇಶಕ್ಕೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾದದ್ದು. ಇಬ್ಬರೂ ವಿಭಿನ್ನ ಕಾಲಘಟ್ಟ ಹಾಗೂ ಶೈಲಿಯ ನಾಯಕರಾಗಿದ್ದರೂ, ಅವರ ಅಂತಿಮ ಧ್ಯೇಯ ಮತ್ತು ಉದ್ದೇಶ ಒಂದೇ ಆಗಿತ್ತು. ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಇತರರ ನೋವನ್ನು ತನ್ನದೆಂದು ಭಾವಿಸುವುದು ಇಬ್ಬರ ಮುಖ್ಯ ತತ್ವವಾಗಿತ್ತು. ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆದರ್ಶಗಳು, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಜೀವನದಲ್ಲಿ ಸರಳ ಮತ್ತು ವಿನಮ್ರವಾಗಿರುವುದು ಅತ್ಯಂತ ಕಷ್ಟಕರವಾದ ವಿಷಯ. ಗಾಂಧೀಜಿ ಮತ್ತು ಶಾಸ್ತ್ರೀಜಿ ಇಬ್ಬರೂ ಸರಳತೆ ಹಾಗೂ ವಿನಮ್ರತೆಯ ಸಂಕೇತವಾಗಿದ್ದರು. ಜೀವನದ ಸಂಘರ್ಷದಲ್ಲಿ ಗೆಲ್ಲಲು ಹಾಗೂ ಸಮಾಜದಲ್ಲಿ ಸೋದರತ್ವ ಉಳಿಸಲು ವಿನಮ್ರತೆ ಅತ್ಯಗತ್ಯ. ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ಅತ್ಯುನ್ನತ ಸ್ಥಾನದಲ್ಲಿದ್ದರೂ ಅತ್ಯಂತ ಸರಳತೆಯನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡಿದ್ದರು. ದೇಶದ ಪ್ರಧಾನಿಯಾಗಿದ್ದರೂ ಶಾಸ್ತ್ರೀಜಿ ಅವರಿಗೆ ಸ್ವಂತದ್ದು ಎನ್ನಲು ಏನೂ ಇರಲಿಲ್ಲ, ಇಡೀ ದೇಶವೇ ಅವರ ಕರೆಗೆ ಓಗೊಡುತ್ತಿತ್ತು. ನಿಸ್ವಾರ್ಥ ಸರಳತೆಯಿಂದ ದೇಶದ ಬೃಹತ್ ಬದಲಾವಣೆಗಳನ್ನು ಸಾಧಿಸಬಹುದು ಎಂಬುದಕ್ಕೆ ಇವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಎಂದರು.
ಇಂದಿನ ಆಧುನಿಕ ಯುಗದಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಸ್ವಾರ್ಥಿಗಳಾಗುತ್ತಿದ್ದಾರೆ. ನಾನು, ನನ್ನದು ಎಂಬ ಸಂಕುಚಿತ ಮನೋಭಾವ ಹೆಚ್ಚಾದಂತೆ ಸಮಾಜ ಕಠೋರವಾಗುತ್ತದೆ. ಆದ್ದರಿಂದ ನಾನು ಎಂಬುದನ್ನು ಬಿಟ್ಟು ನಾವು, ನಮ್ಮದು ಎನ್ನುವ ಸಾಮೂಹಿಕ ನಾಯಕತ್ವ ಹಾಗೂ ಒಗ್ಗಟ್ಟಿನ ಭಾವನೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.ಜಿಪಂ ಸಿಇಒ ಮುಕುಲ್ ಜೈನ್ ಮಾತನಾಡಿ, ನಮ್ಮ ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವಾಗ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಸಿದ್ಧಾಂತಗಳು ಹಾಗೂ ಆದರ್ಶಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಎ.ಎಸ್.ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ, ಸಾಧಿಯ, ಸುಚಿತ್ರ ಅವರಿಂದ ಭಗವದ್ಗೀತೆ, ಕುರಾನ್, ಬೈಬಲ್ ನ ಆಯ್ದ ಚರಣ ಪಠಿಸಿ ವಿವರಿಸಿದರು. ನಂತರ ಅವರಿಗೆ ಜಿಲ್ಲಾಧಿಕಾರಿಗಳಿಂದ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.